ಇತ್ತೀಚಿನ ಸುದ್ದಿ
ಸೂಪರ್ ಮಾರ್ಕೆಟ್ ಅವಾಂತರ
13/07/2021, 21:07
ಸೂಪರ್ ಮಾರ್ಕೆಟ್ನಿಂದಾದ ಒಂದು ಅವಾಂತರ ಹಾಗೂ ಅನುಭವ ಈಗ ನಿಮ್ಮ ಮುಂದೆ. ನನಗೆ ಈ ಸೌಂದರ್ಯ ವರ್ಧಕ ವಸ್ತುಗಳ ಬಗ್ಗೆ ಅರಿವು ಕಡಿಮೆ. ಮೇಕ್ಅಪ್ ಎಲ್ಲಾ ಮಾಡೋದಕ್ಕೆ ಬರುವುದು ಇಲ್ಲ. ಹೆಚ್ಚೆಂದರೆ ಮುಖಕ್ಕೆ ಒಂದು ಕ್ರೀಮ್, ಪೌಡರ್ ಮತ್ತು ಯಾವಾಗಲೂ ತಪ್ಪದೆ ಹಾಕುವ ಕಾಡಿಗೆ. ಆದರೆ ಫೇಸ್ ಕ್ರೀಮ್ ಗೆ ಬಂದಾಗ ಅದು OLAY ಬ್ರಾಂಡ್ ಆಗಿರಬೇಕು. ಅದು ನನಗೆ ಬಹಳ ಹಿಡಿಸಿದ, ಮುಖವನ್ನು ಎಣ್ಣೆ ಬಳಿದ ಹಾಗೆ ಕಾಣಿಸದ ವಸ್ತು.
ಈ ಕ್ರೀಮ್ ಕೆಲವೊಮ್ಮೆ ಮನೆಯ ಹತ್ತಿರದ ಫ್ಯಾನ್ಸಿ ಸ್ಟೋರ್ನಲ್ಲಿ ದೊರಕುವುದೇ ಇಲ್ಲ. ಇದ್ದರೂ ಕೂಡ ಒಂದು ಸಣ್ಣ ಟ್ಯೂಬ್. ಒಂದು ತಿಂಗಳಾಗುವಾಗ ಎಲ್ಲಾ ಖಾಲಿ. ಹೀಗೆ ಒಮ್ಮೆ ಸೂಪರ್ ಮಾರ್ಕೆಟ್ ಗೆ ಹೋದಾಗ ಎಲ್ಲಾ ಖರೀದಿ ನಡೆದು ಬಿಲ್ಲಿಂಗ್ ಕೌಂಟರ್ನಲ್ಲಿ ಇರುವಾಗ OLAY ಕ್ರೀಮ್ ಬೇಕು ಅಂತ ನೆನಪಾಯಿತು. ಗಂಡನಿಗೆ ನಿಧಾನವಾಗಿ ಬಿಲ್ಲಿಂಗ್ ಕಾರ್ಯ ಮಾಡಲು ಹೇಳಿ ನಾನು ಬ್ಯೂಟಿ ಪ್ರಾಡಕ್ಟ್ಸ್ ಇರುವಲ್ಲಿ ಧಾವಿಸಿದೆ. ಹೆಚ್ಚು ಸಮಯವಿರಲಿಲ್ಲ. ಬಿಲ್ಲಿಂಗ್ ಮುಗಿದು ಕಾರ್ಡ್ swipe ಮಾಡಿದ್ದರೆ ಮತ್ತೆ ಕ್ಯೂನಲ್ಲಿ ನಿಲ್ಲಬೇಕು. ಆದಿತ್ಯವಾರ ಇಡೀ ಮಾಲ್ ಜನರಿಂದ ತುಂಬಿ ಹೋಗಿದೆ. ಹಾಗಾಗಿ ಆದಷ್ಟು ಬೇಗ OLAY ಎಂದು ಕಂಡ ಒಂದು ದೊಡ್ಡ ಟ್ಯೂಬನ್ನು ತೆಗೆದುಕೊಂಡು ಕೌಂಟರ್ ಬಳಿ ಓಡಿದೆ. ಭಾರೀ ಸಂತಸ. ಇನ್ನು ಎರಡು ಮೂರು ತಿಂಗಳಿಗೆ ತಲೆಬಿಸಿಯಿಲ್ಲ.
ಮರುದಿನ ನನ್ನ ಮಗಳು ಕಲಿಯುತ್ತಿದ್ದ ಪ್ಲೇ ಸ್ಕೂಲ್ ನಲ್ಲಿ ವಾರ್ಷಿಕೋತ್ಸವ. ಆ ಕಾರ್ಯಕ್ರಮಕ್ಕೆ ನಾನು ಮುಖ್ಯ ಅತಿಥಿ. ಮೊದಲು ಮಗಳನ್ನು ಸಿಂಗಾರಗೊಳಿಸಿ, ಅವಳ ಕಾರ್ಯಕ್ರಮಕ್ಕೆ ಬೇಕಾದ ವೇಷ ಭೂಷಣಗಳನ್ನೆಲ್ಲ ಸಿದ್ಧ ಮಾಡಿದೆ. ನಂತರ ನಾನು ಒಂದು ಕೆಂಪು ಸೀರೆಯನ್ನು ತೊಟ್ಟು, ಅದೇ ಬಣ್ಣದ ದೊಡ್ಡ ಕಿವಿಯೋಲೆ ಧರಿಸಿದೆ. ನಂತರ ಹಿಂದಿನ ದಿನವಷ್ಟೇ ಖರೀದಿಸಿದ OLAY ಕ್ರೀಮನ್ನು ಹಚ್ಚಿದೆ. ಯಾಕೋ ಕೈಯೆಲ್ಲಾ ಅಂಟು ಅಂಟಾಯಿತು. ಮುಖ ಸ್ವಲ್ಪ ಎಣ್ಣೆ ಮೆತ್ತಿದಂತೆ. ಇನ್ನೂ ಹೆಚ್ಚು ಯೋಚಿಸಲು ಸಮಯ ಹಾಗೂ ತಾಳ್ಮೆ ಇರಲಿಲ್ಲ. ಅದರ ಮೇಲೆ ಪೌಡರ್ ಹಾಕಿ ತಯಾರಾಗಿ ಶಾಲೆಗೆ ಹೋದದ್ದಾಯಿತು. ದಾರಿ ಮಧ್ಯದಲ್ಲಿ ಅಮ್ಮ ಒಮ್ಮೆ ‘ ಇವತ್ತು ಯಾಕೋ ನಿನ್ನ ಮುಖ fresh ಅನ್ನಿಸ್ತಾ ಇಲ್ಲ ‘ ಅಂತ ಹೇಳಿದ್ದೂ ಆಯಿತು.
ಮೊದಲು ಸಭಾ ಕಾರ್ಯಕ್ರಮ. ಭಾಷಣ, ಪ್ರಶಸ್ತಿ ವಿತರಣೆ ಎಲ್ಲವೂ ನಡೆಯುತ್ತಿತ್ತು. ಯಾಕೋ ನನ್ನ ಮುಖ ಆ ದಿನ ತುಂಬಾ ಬೆವರುತ್ತಿತ್ತು. ಮಂಗಳೂರಿನ ಹವಾಮಾನವೂ ಹಾಗೆ. ವರ್ಷ ಪೂರ್ತಿ ಸೆಖೆ (ಮಳೆಗಾಲದಲ್ಲೂ!!). ಸಮುದ್ರ ತೀರಕ್ಕೆ ಹತ್ತಿರವಾದ ಕಾರಣ ಬೆವರುವುದು ಹೆಚ್ಚು. ಆದರೂ ಆ ದಿನ ಮುಖವೆಲ್ಲ ಅಂಟಿದ ಹಾಗೆ ಭಾಸ. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ. ಮಗಳು ಎರಡು ನೃತ್ಯದಲ್ಲಿ ಭಾಗವಹಿಸಬೇಕಾದ್ದರಿಂದ ಅವಳಿಗೆ ಮೇಕ್ಅಪ್, hair style ಮಾಡುವುದು, ಅಂಗಿ ತೊಡಿಸುವುದು ಇದರಲ್ಲೇ ಪೂರ್ತಿ ಸಮಯ ಕಳೆಯಿತು. ಊಟದ ನಂತರ ರಾತ್ರಿ ಮನೆ ತಲುಪಿದೆವು.
ಬಂದ ತಕ್ಷಣ ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿದೆ. ಪೂರ್ತಿ ಬೆವರಿ ಎಣ್ಣೆ ಮೆತ್ತಿದಂತೆ ಇತ್ತು. ನಂತರ ಅಲ್ಲೇ ಇದ್ದ OLAY ಕ್ರೀಮ್ ಕಣ್ಣಿಗೆ ಬಿತ್ತು. ಅದನ್ನು ಸರಿಯಾಗಿ ಓದಿದಾಗ ಅದು ಕ್ರೀಮ್ ಆಗಿರದೆ ಫೇಸ್ ವಾಶ್ ಆಗಿತ್ತು. ನನ್ನ ಮುಖ ಇಂಗು ತಿಂದ ಮಂಗನಂತಾಗಿತ್ತು. ಇಷ್ಟೆಲ್ಲಾ ಅವಾಂತರಗಳಿಗೆ ಅದು ಕಾರಣವಾಗಿತ್ತು.
ಆಗ ನೆನಪಾಗಿದ್ದು ಈ ಕಿರಾಣಿ ಅಂಗಡಿ. ಅಲ್ಲಿ ನಾವು ಕ್ರೀಮ್ ಬೇಕು ಎಂದು ಕೇಳುವಾಗ ಅವರೇ ಹುಡುಕಿ ಅದನ್ನು ನಮಗೆ ಕೊಡುತ್ತಾರೆ ಹಾಗೂ ಈ ರೀತಿಯ ತಪ್ಪುಗಳಾದರೆ ಅವರನ್ನು ಒಂದು ಮಾತು ವಿಚಾರಿಸಬಹುದು. ಈಗ ಈ ತಪ್ಪಿಗೆ ನಾನೇ ಹೊಣೆ. ಸೂಪರ್ ಮಾರ್ಕೆಟ್ ನಲ್ಲಿ ಗಡಿಬಿಡಿಯಲ್ಲಿ ಕಣ್ಣಿಗೆ ಕಂಡ OLAY ಯನ್ನು ತಂದ ಪರಿಣಾಮ. ಯಾರ ಮೇಲೆ ರೇಗುವಂತೆಯೂ ಇಲ್ಲ.
ಡ್ರೆಸ್ಸಿಂಗ್ ಟೇಬಲ್ ಮೇಲೆ ಇದ್ದ OLAY ಯು bathroom ಸೇರಿತು. ಇನ್ನು ಮುಂದೆ ಯಾವುದೇ ವಸ್ತುವನ್ನು ಖರೀದಿಸುವಾಗ ಎರಡೆರಡು ಬಾರಿ ಅದರ ಬಗ್ಗೆ ಓದಬೇಕು ಅನ್ನುವುದೂ ತಿಳಿಯಿತು.
ಏನೇ ಹೇಳಿ ಸೂಪರ್ ಮಾರ್ಕೆಟ್ ನಿಂದ ಎಷ್ಟೇ ಲಾಭ ಹಾಗೂ ಉಪಯೋಗಗಳಿದ್ದರೂ, ಈ ಕಿರಾಣಿ ಅಂಗಡಿಗಳ ಅನುಬಂಧ ಅಲ್ಲಿ ದೊರಕುವುದಿಲ್ಲ. ತಂತ್ರಜ್ಞಾನ ಹಾಗೂ ಜೀವನ ಶೈಲಿ ಬದಲಾದಂತೆಲ್ಲ ಎಲ್ಲವೂ ವ್ಯಾಪಾರೀಕರಣವಾದಾಗ ಕಿರಾಣಿ ಅಂಗಡಿಗಳೂ ಕೂಡ ಮೂಲೆ ಗುಂಪಾಗಿವೆ.
ಕಿರಾಣಿ ಅಂಗಡಿಗಳು ಹಾಗೂ ಸೂಪರ್ ಮಾರ್ಕೆಟ್ ಗಳು ನಾವೆಲ್ಲಾ ಚಿಕ್ಕವರಾಗಿದ್ದಾಗ ಅಗತ್ಯ ವಸ್ತು ಖರೀದಿಗೆ ಮನೆಯ ಹತ್ತಿರದ ಕಿರಾಣಿ ಅಂಗಡಿಗೆ ಹೋಗುತ್ತಿದೆವು. ಅದರ ಅನುಭವವೇ ಬೇರೆ. ಮನೆಯಿಂದ ಅಮ್ಮ ತಯಾರು ಮಾಡಿದ ಪಟ್ಟಿಯನ್ನು ಹಿಡಿದು ಅಪ್ಪ ಹತ್ತಿರದ ಹಾಗೂ ಪರಿಚಯ ಇರುವ ಅಂಗಡಿಗೆ ಹೋಗಿ ತಿಂಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ತರುತ್ತಿದ್ದರು. ನಡುವಿನ ದಿನಗಳಲ್ಲಿ ಯಾವುದಾದರೂ ಸಾಮಾನಿನ ಅಗತ್ಯ ಬಂದರೆ ಅಣ್ಣ ಅಥವಾ ನಾನು ಸೈಕಲ್ನಲ್ಲಿ ಹೋಗಿ ತರುತ್ತಿದ್ದೆವು. ಆ ಅಂಗಡಿಗಳು ಹಾಗೂ ಅಲ್ಲಿನವರೊಂದಿಗಿದ್ದ ಅನುಬಂಧ ಈಗಿನ ಸೂಪರ್ ಮಾರ್ಕೆಟ್ ಗಳಲ್ಲಿ ದೊರಕುವುದಿಲ್ಲ.
ಕಿರಾಣಿ ಅಂಗಡಿಗಳಿಗೆ ಅಲ್ಲಿಯೇ ಹತ್ತಿರ ವಾಸಿಸುವ ಹಾಗೂ ಪರಿಚಯ ಇರುವವರೇ ಬರುವುದರಿಂದ, ಪುಸ್ತಕದಲ್ಲಿ ಪ್ರತೀ ಮನೆಯ ಖರೀದಿಯನ್ನು ಬರೆದು ತಿಂಗಳಿಗೆ ಒಮ್ಮೆ ಪಾವತಿ ಮಾಡುವ ವ್ಯವಸ್ಥೆ ಕೂಡ ಇತ್ತು. ಹಣ ಇರುವವರು, ಇಲ್ಲದವರು ಎಲ್ಲರೂ ಇದನ್ನು ರೂಢಿ ಮಾಡಿಕೊಂಡಿದ್ದರು. ಇದರಿಂದ ಅದು ನಮ್ಮದೇ ಅಂಗಡಿ ಅನ್ನುವ ಅನುಭವ.
ನಾವು ಭದ್ರಾವತಿಯ Hudko ಕಾಲೋನಿಯಲ್ಲಿ ಇದ್ದಾಗ ಭಾರತ್ ಪ್ರಾವಿಷನ್ ಸ್ಟೋರ್ಸ್, ಕಾಗದ ನಗರದ ಮೀನಾಕ್ಷಿ ಪ್ರಾವಿಷನ್ ಸ್ಟೋರ್ಸ್ಗಳನ್ನೆಲ್ಲ ಮರೆಯುವಂತಿಲ್ಲ.
ಈ ಅಂಗಡಿಗಳಿಗೆ ಹೋದಾಗ ಅಲ್ಲಿ ನಡೆಯುವ ಸಂಭಾಷಣೆ, ಎಲ್ಲರ ಕುಶಲೋಪರಿ, ರಾಜಕೀಯದ ಬಗ್ಗೆ ಚರ್ಚೆ ಹಾಗೂ ಸಾಮಾನು ಕೊಳ್ಳಲು ಬಂದ ಇತರೆ ಜನರೊಟ್ಟಿಗೆ ಹರಟೆ ಈಗಲೂ ನೆನಪಿದೆ. ಅದಲ್ಲದೆ ಯಾವ ಅಕ್ಕಿ ಚೆನ್ನಾಗಿ ಬೇಯುತ್ತದೆ, ಯಾವ ಸೋಪ್ ಕಡಿಮೆ ದರಕ್ಕೆ ಸಿಗುತ್ತದೆ ಹಾಗೂ ಯಾವ ವಸ್ತುವಿಗೆ ಉಚಿತ offer ಗಳಿವೆ ಎಂಬುದನ್ನ ಪ್ರೀತಿಯಿಂದ ಹಾಗೂ ತಮ್ಮ ಅನುಭವದಿಂದ ಅಂಗಡಿ ಮಾಲೀಕರು ಹೇಳುತ್ತಿದ್ದರು.
ಅದೇ ಈಗಿನ ಸೂಪರ್ ಮಾರ್ಕೆಟ್ ಗಳಲ್ಲಿ ಒಬ್ಬರ ಪರಿಚಯವೂ ಇರುವುದಿಲ್ಲ. ಎಲ್ಲಾ ವಸ್ತುಗಳೂ ಹರಡಿಕೊಂಡಿರುವುದರಿಂದ, ನಮಗೆ ಅಗತ್ಯವಿರುವ ಇಲ್ಲದೇ ಇರುವ ಎಲ್ಲವೂ ಬುಟ್ಟಿಯನ್ನು ಸೇರುತ್ತವೆ. ಈ offer ಗಳಂತೂ ನಮ್ಮನ್ನು ಹೆಚ್ಚು ಖರ್ಚು ಮಾಡಿಸಲೇ ಇರುತ್ತವೆ. ನಮಗೆ ಒಂದು biscuit ಪ್ಯಾಕೆಟ್ ಅಗತ್ಯವಿದ್ದರೆ, ಅಲ್ಲಿ buy 3 get 2 offer ನೋಡಿ ಅನಗತ್ಯವಾಗಿ 4 ಪ್ಯಾಕೆಟ್ ಹೆಚ್ಚು ಮನೆಯ ಡಬ್ಬಿಯಲ್ಲಿ ಬಂದು ಕೂರುತ್ತವೆ. ಇನ್ನು ಒಂದು ಪ್ರತಿ dress ಖರೀದಿ ಮಾಡಲು ಹೋಗಿ, ಎರಡು ಸಾವಿರಕ್ಕಿಂತ ಹೆಚ್ಚು ವ್ಯಾಪಾರ ಮಾಡಿದರೆ ಡಿಸ್ಕೌಂಟ್ ಎಂದು ಇನ್ನೂ ಎರಡು dress ತೆಗೆದುಕೊಳ್ಳೋದು. ಕೊನೆಯಲ್ಲಿ ಅದು 1950 ರೂಪಾಯಿಗೆ ನಿಂತರೆ 100 ರೂಪಾಯಿಯ ಕರ್ಚಿಫ್ ಪ್ಯಾಕೆಟ್ ತಗೊಳ್ಳೋದು ಅಗತ್ಯ ಇಲ್ಲದಿದ್ದರೂ. ಇಷ್ಟೆಲ್ಲಾ ಮಾಡೋದು 200 ರೂಪಾಯಿಯ ಡಿಸ್ಕೌಂಟ್ಗಾಗಿ ಎಲ್ಲಾ ಮಧ್ಯಮ ವರ್ಗದ ಜನರೂ ಹೀಗೆಯೇ. ಮನೆಗೆ ತಲುಪುವಾಗ ಅಗತ್ಯಕ್ಕಿಂತ ಹೆಚ್ಚು ಅನಗತ್ಯ ವಸ್ತುಗಳು ನಮ್ಮ ಚೀಲದಲ್ಲಿ.
ಹಾಗೆಯೇ ಈ ಸೂಪರ್ ಮಾರ್ಕೆಟ್ ಗಳಲ್ಲಿ ನಮಗೆ ಬೇಕಾದ ವಸ್ತುಗಳನ್ನು ನಾವೇ ಹುಡುಕಿ, ಆಯ್ಕೆ ಮಾಡಿಕೊಳ್ಳಬೇಕು. ಹೆಚ್ಚೆಂದರೆ ಆ ವಸ್ತು ಎಲ್ಲಿದೆ ಅಥವಾ stock ಇದೆಯಾ ಎಂದು ವಿಚಾರಿಸಬಹುದು. ಇನ್ನೂ ಹೆಚ್ಚು ಕೇಳಲು ಅಲ್ಲಿರುವ ಗ್ರಾಹಕ ಪ್ರತಿನಿಧಿಗೂ ಪುರುಸೊತ್ತು ಇರುವುದಿಲ್ಲ ಮತ್ತು ಸುತ್ತಲೂ ಇರುವ ಅಪರಿಚಿತರಿಂದ ಕೇಳಲೂ ಮುಜುಗರ.
ಯಾವ ಅಕ್ಕಿ ಬೇಯುತ್ತದೆ, ಬೇಳೆ ಯಾವುದು ಒಳ್ಳೆಯುವುದು, ಯಾವ brand ಒಳ್ಳೆಯದು ಎಂದು ಕೇಳಿದರೆ ಅಲ್ಲಿರುವ ವ್ಯಕ್ತಿಗೆ ಅದರ ಬಗ್ಗೆ ತಿಳಿದೂ ಇರುವುದಿಲ್ಲ. ನಮ್ಮ ಖರೀದಿಗೆ ನಾವೇ ಜವಾಬ್ದಾರಿ.