ಇತ್ತೀಚಿನ ಸುದ್ದಿ
ಮಂಗಳೂರು ದಕ್ಷಿಣ: ಕಾಂಗ್ರೆಸ್ ನಿಂದ ಈ ಬಾರಿ ಹೊಸ ಮುಖ?; ಯುವ ನ್ಯಾಯವಾದಿ ಪದ್ಮರಾಜ್ ಆರ್. ಅಭ್ಯರ್ಥಿ?
25/03/2023, 15:49
ಮಂಗಳೂರು(reporterkarnataka.com): ಮುಂಬರುವ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಎರಡನೇ ಪಟ್ಟಿಗೆ ಟಿಕೆಟ್ ಆಕಾಂಕ್ಷಿಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಪುತ್ತೂರು ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಎನ್ನುವ ಕುತೂಹಲ ಎಲ್ಲೆಡೆ ಮೂಡಿದೆ.
ಹಲವು ಚುನಾವಣೆಗಳಲ್ಲಿ ಸೋತ ಕಾಂಗ್ರೆಸ್ ಕೂಡ ಈ ಬಾರಿ ತನ್ನ ಸ್ಟಾಟಜಿಯನ್ನು ಸ್ವಲ್ಪ ಬದಲಾಯಿಸಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ವಸಂತ ಬಂಗೇರ ಬದಲಿಗೆ ಹೊಸ ಮುಖಕ್ಕೆ ಟಿಕೆಟ್ ನೀಡಿದೆ. ರಕ್ಷಿತ್ ಶಿವರಾಂ ಈ ಬಾರಿ ಬೆಳ್ತಂಗಡಿಯಿಂದ ಅಖಾಡಕ್ಕಿಳಿದಿದ್ದಾರೆ. ಹಾಗೆ ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣದಲ್ಲಿ ಕೂಡ ಕಾಂಗ್ರೆಸ್ ಹೊಸ ಮುಖಕ್ಕೆ ಅವಕಾಶ ನೀಡಲಿದೆ. ಕಾಂಗ್ರೆಸ್ ಹೈಕಮಾಂಡಿನ ಸೂಚನೆ ಮೇರೆಗೆ ಕೆಪಿಸಿಸಿ ತನ್ನ ಸ್ಟಾಟಜಿ ಬದಲಾಯಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಬದಲಿಗೆ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಆಲಿ ಅವರನ್ನು ಕಣಕ್ಕಿಸುವ ಬಗ್ಗೆ ಕೆಪಿಸಿಸಿ ಚಿಂತನೆ ನಡೆಸಿದೆ. ಅದೇ ರೀತಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೂ ಈ ಬಾರಿ ಬದಲಾವಣೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಮಂಗಳೂರು ಉತ್ತರವನ್ನು ಅಲ್ಪಸಂಖ್ಯಾತ ಅಭ್ಯರ್ಥಿ ಗೆ ಬಿಟ್ಟುಕೊಡುವುದರಿಂದ ಮಂಗಳೂರು ದಕ್ಷಿಣದಲ್ಲಿ ಬೇರೆ ಸಮುದಾಯದ ಅಭ್ಯರ್ಥಿ ಗೆ ಅವಕಾಶ ಕಲ್ಪಿಸುವ ಬಗ್ಗೆ ಪಕ್ಷದ ಹೈಕಮಾಂಡಿನಿಂದ ಸೂಚನೆ ಬಂದಿದೆ ಎನ್ನಲಾಗಿದೆ. ಕಾಂಗ್ರೆಸ್ ನ ಬದಲಾದ ಸ್ಟಾಟಜಿ ಪ್ರಕಾರ ದಕ್ಷಿಣದಿಂದ ಯುವ ನ್ಯಾಯವಾದಿ ಪದ್ಮರಾಜ್ ಆರ್. ಅವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ.
ಯಾರು ಈ ಪದ್ಮರಾಜ್?:
ಮಂಗಳೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಪದ್ಮರಾಜ್ ಅವರದ್ದು ಬಹುದೊಡ್ಡ ಹೆಸರು. ಕುದ್ರೋಳಿ ಗೋಕರ್ಣನಾಥ ದೇಗುಲದ ಟ್ರಸ್ಟಿಯಾಗಿ ಅವರು ನಾಡಿನುದ್ಧಗಲಕ್ಕೂ ಚಿರಪರಿಚಿತರು. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪದ್ಮರಾಜ್ ಅವರು ಕೇಂದ್ರ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಅವರ ಕಟ್ಟರ್ ಅನುಯಾಯಿ. ಹಾಗೆ ಪೂಜಾರಿಯವರ ಆಪ್ತ ಬಳಗದವರಲ್ಲಿ ಒಬ್ಬರು. ಗುರು ಬೆಳದಿಂಗಳು ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಮಂಗಳೂರಿನ ನಾಗೂರಿ ಬಳಿ ಇತ್ತೀಚೆಗೆ ನಡೆದ ಕುಕ್ಕರ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡ ಆಟೋ ಚಾಲಕನ ಕುಟುಂಬದ ಹಳೆಯ ಮನೆಯನ್ನು 6 ಲಕ್ಷ ರೂ. ವೆಚ್ಚದಲ್ಲಿ ಕೇವಲ 4 ತಿಂಗಳ ಅವಧಿಯಲ್ಲಿ ಪದ್ಮರಾಜ್ ಅವರ ನೇತೃತ್ವದ ಟ್ರಸ್ಡ್ ಮೂಲಕ ನವೀಕರಣ ಮಾಡಲಾಗಿದೆ. ಮೊನ್ನೆ ಯುಗಾದಿಯ ದಿನ ಮನೆಯ ಉದ್ಘಾಟನೆ ಕೂಡ ನಡೆದಿದೆ. ಇದು ಪದ್ಮರಾಜ್ ಅವರ ಸಮಾಜ ಸೇವೆ ಬಗ್ಗೆ ಒಂದು ಸಣ್ಣ ಸ್ಯಾಂಪಲ್ ಅಷ್ಟೇ. ಬಿಲ್ಲವ ಸಮುದಾಯಕ್ಕೆ ಸೇರಿದ ಯುವ ನಾಯಕ ಪದ್ಮರಾಜ್ ಅವರ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.