ಇತ್ತೀಚಿನ ಸುದ್ದಿ
ಅರಳು ಪ್ರತಿಭೆ ಕುಡ್ಲದ ಕುವರಿ ಪ್ರಗತಿ ಬೇಕಲ್: ಸಂಗೀತಕ್ಕೂ ಸೈ, ನಿರೂಪಣೆಗೂ ಜೈ
24/03/2023, 10:34
ಅನಾಮಿಕ ಮಂಗಳೂರು
info.reporterkarnataka@gmail.com
ಸಂಗೀತ ಮತ್ತು ನಿರೂಪಣಾ ಕ್ಷೇತ್ರದಲ್ಲಿ ಭರವಸೆ ಮೂಡಿಸುತ್ತಿರುವ ಮಂಗಳೂರಿನ ಉದಯೋನ್ಮುಖ ಬಹುಮುಖ ಪ್ರತಿಭೆ ಪ್ರಗತಿ ಬೇಕಲ್
ಅವರು. ಸಂಗೀತ, ಚಿತ್ರಕಲೆ, ಕ್ರಾಪ್ಟ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಪ್ರಗತಿ ಅವರು ತನ್ನ ಕಿರು ವಯಸ್ಸಿನಲ್ಲೇ ಭರವಸೆ ಮೂಡಿಸಿದ್ದಾರೆ.
ಪ್ರದೀಪ್ ಬೇಕಲ್ ಮತ್ತು ಸಿಂಧು ಪಿ. ಬೇಕಲ್ ಅವರ ಪುತ್ರಿಯಾದ ಪ್ರಗತಿ ತಮ್ಮ ಆರಂಭಿಕ ಜ್ಯೂನಿಯರ್ ಹಂತದ ಕರ್ನಾಟಕ ಸಂಗೀತಾಭ್ಯಾಸವನ್ನು ವಿದುಷಿ ಶೀಲಾ ದಿವಾಕರ್ ಅವರಲ್ಲಿ ಪಡೆದರು. ಗುರುಗಳಾದ ಶೀಲಾ ದಿವಾಕರ್ ದಿವಂಗತರಾದ ಬಳಿಕ ಕರ್ನಾಟಕ ಸಂಗೀತ ಶಿಕ್ಷಣವನ್ನು ವಿದುಷಿ ಸಂಗೀತ ಬಾಲಚಂದ್ರ ಅವರಲ್ಲಿಯೂ , ಸುಗಮ ಸಂಗೀತ ಶಿಕ್ಷಣವನ್ನು ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಂಗೀತ ಕಲಾವಿದ ಚಂದ್ರಶೇಖರ್ ಮಂಗಳೂರು ಅವರಲ್ಲಿಯೂ ಪಡೆಯುತ್ತಿದ್ದಾರೆ.
ಗುರುಗಳ ಸಮ್ಮುಖದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ಪ್ರಗತಿ ಅವರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ, ಶ್ರೀ ಕ್ಷೇತ್ರ ಬೋಳಾರ, ಶ್ರೀ ಕ್ಷೇತ್ರ ಪೊಳಲಿ ,ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಸಂಗೀತ ಕ್ಷೇತ್ರ ಮಾತ್ರವಲ್ಲದೆ ಕಾರ್ಯಕ್ರಮ ನಿರೂಪಣೆ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಈ ಯುವ ಪ್ರತಿಭೆ ಹಲವಾರು ಕಾರ್ಯಕ್ರಮಗಳಲ್ಲೂ ನಿರೂಪಣೆ ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುವ ಪ್ರಗತಿ, ಸಂಘ ಸಂಸ್ಥೆಗಳ ಸನ್ಮಾನ ಗೌರವಗಳಿಗೂ ಪಾತ್ರರಾಗಿರುತ್ತಾರೆ. ಯು ಟ್ಯೂಬ್ ವಾಹಿನಿಯೊಂದರಲ್ಲಿ ಭಕ್ತಿಗೀತೆಗೆ ಸಹಗಾಯಕಿಯಾಗಿಯೂ ಧ್ವನಿ ನೀಡಿರುತ್ತಾರೆ.
ಕಲಿಕೆಯಲ್ಲಿಯೂ ಪ್ರತಿಭಾನ್ವಿತೆಯಾಗಿರುವ ಪ್ರಗತಿ ಬೇಕಲ್ ಮಂಗಳೂರಿನ ಜೆರೋಸಾ ಪ್ರೌಢ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಎಸ್ ಎಸ್ ಎಲ್ ಸಿ ವಿಧ್ಯಾಭ್ಯಾಸ ಪಡೆದು, ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯಸಿ ಶಿಕ್ಷಣ ಪಡೆಯುತ್ತಿದ್ದಾರೆ. ಪೇಪರ್ ಕ್ರಾಪ್ಟಿಂಗ್ , ಚಿತ್ರಕಲೆಯನ್ನು ತಮ್ಮ ಹವ್ಯಾಸವನ್ನಾಗಿರಿಸಿ ಕೊಂಡಿದ್ದಾರೆ.
ಸುಶ್ರಾವ್ಯವಾದ ಕಂಠವನ್ನು ಹೊಂದಿರುವ ಮತ್ತು ಸೊಗಸಾಗಿ , ಮೌಲ್ಯಯುತವಾಗಿ ಕಾರ್ಯಕ್ರಮಗಳನ್ನು ನಿರೂಪಿಸುವ ಮಂಗಳೂರಿನ ಕುವರಿ ಪ್ರಗತಿಯ ಪ್ರತಿಭೆ ಇನ್ನಷ್ಟು ಬೆಳಗಲಿ.