ಇತ್ತೀಚಿನ ಸುದ್ದಿ
ಪೌರ ಕಾರ್ಮಿಕರ ಬೇಡಿಕೆ ಹಾಗೂ ತ್ಯಾಜ್ಯ ವಿಲೇವಾರಿ ತಕ್ಷಣ ಮಾಡದಿದ್ದಲ್ಲಿ ಶಾಸಕರ ಮನೆಯೆದುರು ತ್ಯಾಜ್ಯ ಸುರಿದು ಪ್ರತಿಭಟನೆ: ಬಿ ಕೆ ಇಮ್ತಿಯಾಜ್
22/03/2023, 10:10

ಮಂಗಳೂರು(reporterkarnataka.com): ಕಳೆದ 9 ದಿನಗಳಿಂದ ರಾಜ್ಯಾದ್ಯಂತ ಪೌರ ಕಾರ್ಮಿಕರು ,ಮುನ್ಸಿಪಲ್ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರೂ ಬಿಜೆಪಿ ಸರಕಾರವು ಯಾವುದೇ ರೀತಿಯ ಸ್ಪಂದನ ಮಾಡದೆ ತನ್ನ ಕ್ರೌರ್ಯವನ್ನು ಪ್ರದರ್ಶಿಸಿದೆ. ತೀರಾ ಸಂಕಷ್ಟದಲ್ಲಿರುವ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡದ ಶಾಸಕ ವೇದವ್ಯಾಸ ಕಾಮತ್ ಅವರು ಬೂಟಾಟಿಕೆಯ ರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ. ಕೂಡಲೇ ಕಾರ್ಮಿಕರ ಸಮಸ್ಯೆ ಇತ್ಯರ್ಥ ಗೊಳ್ಳದಿದ್ದಲ್ಲಿ ಶಾಸಕ ವೇದವ್ಯಾಸ ಕಾಮತ್ ಮನೆಯೆದುರು ತ್ಯಾಜ್ಯ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ. ಕೆ. ಇಮ್ತಿಯಾಜ್ ಎಚ್ಚರಿಕೆ ನೀಡಿದರು.
ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಪೌರ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಲಾಲ್ ಬಾಗ್ ನಲ್ಲಿರುವ ಪಾಲಿಕೆ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ನಗರಪಾಲಿಕೆ ಗುತ್ತಿಗೆ ಹೆಸರಿನಲ್ಲಿ ಬಡ ಕಾರ್ಮಿಕರ ಹೊಟ್ಟೆಗೆ ಹೊಡೆಯುತ್ತಿದೆ. ಬಡ ನೌಕರರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಕಮಿಷನ್ ರೂಪದಲ್ಲಿ ನುಂಗಿ ನೀರು ಕುಡಿಯುತ್ತಿದೆ ಎಂದು ಅವರು ಆರೋಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ , ಯಾವುದೇ ಸಾಮಾಜಿಕ ಭದ್ರತೆಯಿಲ್ಲದೆ ಅತ್ಯಂತ ದೀರ್ಘ ಅವಧಿಯಲ್ಲಿ ಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ ಪೌರ ಹಾಗೂ ಮುನ್ಸಿಪಲ್ ಕಾರ್ಮಿಕರ ಬದುಕು ತೀರಾ ಶೋಚನೀಯವಾಗಿದೆ. ರಾಜ್ಯವನ್ನಾಳಿದ ಎಲ್ಲಾ ಸರಕಾರಗಳು ಇಲ್ಲಿಯವರೆಗೂ ಕಿಂಚಿತ್ತೂ ಗಮನ ನೀಡಿಲ್ಲ.ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಹೇಳಿದರು.
ಪೌರ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ರೈತ ಸಂಘದ ಜಿಲ್ಲಾ ನಾಯಕರಾದ ಯಾದವ ಶೆಟ್ಟಿ,ಮಾಜಿ ಮೇಯರ್ ಅಶ್ರಫ್ ಕೆ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ ಐ ಜಿಲ್ಲಾ ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯುಬ್ ಬೆಂಗ್ರೆ, ಸಿಐಟಿಯು
ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೋಗರು, ಮಹಮ್ಮದ್ ಮುಸ್ತಫಾ,ವಿಲ್ಲಿ ವಿಲ್ಸನ್, ಮಹಮ್ಮದ್ ಆಸಿಫ್, ಹರೀಶ್ ಪೂಜಾರಿ,ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ,ಅಸುಂತಾ ಡಿಸೋಜ, ಯೋಗಿತಾ ಉಳ್ಳಾಲ, ವಿದ್ಯಾರ್ಥಿ ನಾಯಕರಾದ ವಿನೀತ್ ದೇವಾಡಿಗ,ಯುವ ವಕೀಲರಾದ ನಿತಿನ್ ಕುತ್ತಾರ್,ಸುನಂದಾ ಕೊಂಚಾಡಿ,ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ,ಸಫಾಯಿ ಕರ್ಮಚಾರಿ ಸಂಘದ ಮುಖಂಡರಾದ ರಾಜೇಶ್,ಪದ್ಮನಾಭ, ಸಂತೋಷ್,ಅಶ್ವಿನ್ ಮುಂತಾದವರು ಉಪಸ್ಥಿತರಿದ್ದರು.