ಇತ್ತೀಚಿನ ಸುದ್ದಿ
ಮೂಡಿಗೆರೆ ಶಾಸಕರ ಮಹಾ ಎಡವಟ್ಟು: ಒಂದೇ ಗ್ರಾಮಕ್ಕೆ ಎರಡು ಸೇತುವೆ!: ನಿರ್ಮಾಣಗೊಳ್ಳುತ್ತಿರುವ ಸೇತುವೆ ಪಕ್ಕವೇ ಮತ್ತೊಂದಕ್ಕೆ ಶಿಲಾನ್ಯಾಸ!!
19/03/2023, 12:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ. ಒಂದೇ ಊರಿಗೆ ಎರಡು ಸೇತುವೆ ಸ್ಯಾಂಕ್ಷನ್ ಮಾಡಿಸಿದ್ದಾರೆ. ಒಂದು ಸೇತುವೆಯ ಕಾಮಗಾರಿ ಇನ್ನೇನು ಮುಗಿಯುವಷ್ಟರಲ್ಲಿ, ಪಕ್ಕದಲ್ಲೇ ಇನ್ನೊಂದು ಸೇತುವೆಗೆ ಗುದ್ದಲಿ ಪೂಜೆ ನಡೆದಿದೆ. ಊರಿನವರಿಗೆ ಅಚ್ಚರಿ, ಗೊಂದಲ ಎರಡೂ ಆಗಿದೆ.
ಇದೆಲ್ಲ ನಡೆದಿರುವುದು ಕಳಸ ತಾಲೂಕಿನ ಮುಂಡುಗದಮನೆ ಗ್ರಾಮದಲ್ಲಿ. ಇದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರ ವ್ಯಾಪ್ತಿಗೆ ಬರುತ್ತದೆ. ಒಂದು ಸೇತುವೆ ಕಾಮಗಾರಿ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಮತ್ತೊಂದು ಸೇತುವೆ ಕಾಮಗಾರಿ ಆರಂಭವಾಗಿದೆ. ಒಂದೇ ಊರಿಗೆ ಡಬಲ್ ಸೇತುವೆ ಕಂಡು ಗ್ರಾಮಸ್ಥರು ಹುಬ್ಬು ಹಾರಿಸಿದ್ದಾರೆ.
ಮುಕ್ತಾಯ ಹಂತಕ್ಕೆ ಬಂದಿರುವ ಸೇತುವೆ ೨೦೧೮ ರಲ್ಲಿ ಆರಂಭವಾಗಿತ್ತು. ೩೮ ಲಕ್ಷ ವೆಚ್ಚದಲ್ಲಿ ಸೇತುವೆ ಕಾಮಗಾರಿ ಆರಂಭಗೊಂಡಿತ್ತು.
ದಿಢೀರ್ ಗುದ್ದಲಿ ಪೂಜೆ ಮಾಡಿ ಆರಂಭವಾದ 2 ಕೋಟಿ ವೆಚ್ಚದ ಮತ್ತೊಂದು ಸೇತುವೆ ಕೆಲಸ ಪಕ್ಕದಲ್ಲೇ ಆರಂಭವಾಗಿದೆ. ಶಾಸಕ ಕುಮಾರಸ್ವಾಮಿಯಿಂದ ಸೇತುವೆ ನಿರ್ಮಾಣಕ್ಕೆ ಎರಡು ಕೋಟಿ ಹಣ ಬಿಡುಗಡೆಯಾಗಿತ್ತು.
ಧಾರಾಕಾರ ಮಳೆಯಿಂದ ದ್ವೀಪದಂತಾಗುತ್ತಿದ್ದ ೨೦ ಮನೆಗಳಿರುವ ಮುಂಡುಗದಮನೆ ಗ್ರಾಮದಲ್ಲಿ ಈ ಎರಡನೇ ಸೇತುವೆಗೆ ಗುದ್ದಲಿಪೂಜೆ ನಡೆದಿದೆ.
ನಿರ್ಮಾಣವಾಗುತ್ತಿರುವ ಸೇತುವೆ ಪಕ್ಕದಲ್ಲೇ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇರೆ ಗ್ರಾಮದ ಅಭಿವೃದ್ಧಿ ಕೆಲಸಕ್ಕೆ ಹಣ ಬಳಸದೆ ಎರಡು ಕೋಟಿ ಹಣ ಪೋಲು ಎಂದು ಆಕ್ರೋಶಗೊಂಡಿದ್ದಾರೆ.