ಇತ್ತೀಚಿನ ಸುದ್ದಿ
ರಾಜ್ಯ ಅಸೆಂಬ್ಲಿ ಎಲೆಕ್ಷನ್: ಯಾವುದೇ ಕ್ಷಣ ಚುನಾವಣೆ ಘೋಷಣೆ ಸಾಧ್ಯತೆ; ಮೇ 17ರೊಳಗೆ ಹೊಸ ಸರಕಾರ
12/03/2023, 21:37
ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಕೇಂದ್ರ ಚುನಾವಣಾ ಆಯೋಗದ ತಂಡ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದೆ. ಮಾರ್ಚ್ 12ರ ಬಳಿಕ ಯಾವುದೇ ಕ್ಷಣದಲ್ಲಿ ಚುನಾವಣೆ ಘೋ಼ಷಣೆಯಾಗುವ ಸಾಧ್ಯತೆಗಳಿವೆ.
2018ರಲ್ಲಿ ಮಾರ್ಚ್ 27ರಂದು ಚುನಾವಣೆ ಘೋಷಣೆಯಾಗಿತ್ತು. ಅಂದೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು.
ಮೇ 12ರಂದು ಚುನಾವಣೆ ನಡೆದಿತ್ತು. ಮೇ 15ರಂದು ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ ಮಾರ್ಚ್ 12ರ ಬಳಿಕ ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗಬಹುದು. ಏಪ್ರಿಲ್ 29 ಅಥವಾ 30. ಇಲ್ಲದಿದ್ದರೆ ಮೇ 4 ಅಥವಾ 5ರಂದು ಚುನಾವಣೆ ನಡೆಸಬಹುದು ಎಂದು ರಾಜ್ಯ ಚುನಾವಣಾ ಆಯೋಗ ಅಳೆದು ತೂಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದೆ. ಮೇ 17ರೊಳಗೆ ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ.
ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನಡೆದಿದೆ. ಆಯಕಟ್ಟಿನ ಅಧಿಕಾರಿಗಳ ವರ್ಗಾವಣೆ ನಡೆದಿದೆ. ಮತದಾರರ ಪಟ್ಟಿ ಅಂತಿಮಗೊಂಡಿದೆ.
ಚುನಾವಣಾ ಸಂಬಂಧಿಸಿದ ಇತರ ಪ್ರಕ್ರಿಯೆಗಳು ನಡೆಯುತ್ತಿವೆ. ಚುನಾವಣೆ ಘೋಷಣೆಯಾದ ಬಳಿಕ ಶಿಕ್ಷಕರು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವುದರಿಂದ ಶಾಲಾ ಕಾಲೇಜುಗಳ ಪರೀಕ್ಷೆಗಳು ಏಪ್ರಿಲ್ ತಿಂಗಳಿನೊಳಗೆ ಮುಗಿಸುವ ಕಾರ್ಯದಲ್ಲಿ ಶಿಕ್ಷಣ ಇಲಾಖೆ ನಿರತವಾಗಿದೆ.














