ಇತ್ತೀಚಿನ ಸುದ್ದಿ
ದಳಪತಿಗಳ ನಾಡಿನಲ್ಲಿ ಜೆಡಿಎಸ್ ಕುರಿತು ಚಕಾರವೆತ್ತದ ಪ್ರಧಾನಿ ಮೋದಿ: ಮಂಡ್ಯ ಜನತೆಗೆ ಶಿರಭಾಗಿಸಿದ ಪಿಎಂ
12/03/2023, 19:29
ಸ್ವಪ್ನಾ ದಿನಕರ್ ಮದ್ದೂರು ಮಂಡ್ಯ
info.reporterkarnataka@gmail.com
ದಳಪತಿಗಳ ಭದ್ರಕೋಟೆ ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯಲ್ಲಿ ಭಾನುವಾರ ಭರ್ಜರಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರೂ ಜನತಾ ದಳ ಕುರಿತು ಯಾವುದೇ ಟೀಕೆ ಮಾಡದೆ ಅಚ್ಚರಿ ಉಂಟು ಮಾಡಿದರು.
ಸಾಮಾನ್ಯವಾಗಿ ಕುಟುಂಬ ರಾಜಕಾರಣ ಬಗ್ಗೆ ಜನತಾ ದಳವನ್ನು ಟೀಕೆ ಮಾಡುವ ಮೋದಿ ಅವರು
ಸಕ್ಕರೆ ನಾಡು ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಬಗ್ಗೆಯಾಗಲಿ, ಕುಮಾರಸ್ವಾಮಿ ಕುರಿತಾಗಲಿ ಯಾವುದೇ ಟೀಕೆ ಮಾಡಿಲ್ಲ. ಕುಟುಂಬ ರಾಜಕಾರಣದ ಸೊಲ್ಲೆತ್ತಲಿಲ್ಲ. ಆದರೆ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದರು.
ಕಾಂಗ್ರೆಸ್ ವಿರುದ್ಧ ಮಾತನಾಡಿದ ಅವರು,
ಕಾಂಗ್ರೆಸ್, ಮೋದಿಯವರ ಸಮಾಧಿಯನ್ನು ಅಗೆಯುವ ಕನಸು ಕಾಣುತ್ತಿದೆ. ದೇಶದ ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದವೇ ಮೋದಿಯವರ ಬಹುದೊಡ್ಡ ಭದ್ರತಾ ಕವಚ ಎಂಬುದು ಗೊತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮೋದಿ ಸಮಾಧಿ ತೋಡುವುದರಲ್ಲಿ ನಿರತವಾಗಿದೆ, ಆದರೆ ಮೋದಿ ಬಡವರ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಕಾಂಗ್ರೆಸ್ ಬಡವರನ್ನೇ ಮರೆತಿದೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಡವರನ್ನು ಮರೆತಿತ್ತು. ಗ್ರಾಮೀಣ ಜನರ ಬದುಕಿನ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಹಲವು ಯೋಜನೆಗಳನ್ನು ಘೋಷಿಸಿದ್ದೇವೆ. ರೈತರಿಗೆ ಬಜೆಟ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಡಬಲ್ ಇಂಜಿನ್ ಸರ್ಕಾರ ರೈತರು ಹಾಗೂ ಬಡವರ ಪರ ಕೆಲಸ ಮಾಡುವ ಸರ್ಕಾರ ಎಂದು ಬಣ್ಣಿಸಿದರು.
ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಕೇಂದ್ರ ಸರ್ಕಾರ 6,000 ಮತ್ತು ಕರ್ನಾಟಕ ಸರ್ಕಾರ 4000 ಸೇರಿ ಒಟ್ಟು 10 ಸಾವಿರ ರೂಪಾಯಿ ಸಿಗುತ್ತಿದೆ. ಇದರಿಂದ ರೈತರಿಗೆ ಎರಡು ಬಾರಿ ಅನುಕೂಲವಾಗಿದ್ದು, ಅವರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.














