ಇತ್ತೀಚಿನ ಸುದ್ದಿ
ಸವಾಲುಗಳನ್ನೇ ಅವಕಾಶವಾಗಿ ಬದಲಾಯಿಸಿಕೊಂಡ ಹಠವಾದಿ!: ಬರೋಬ್ಬರಿ 7 ಹುದ್ದೆಗಳ ಸರದಾರ ಈ ಬಸವರಾಜ!!
12/03/2023, 18:58
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕೆಂಬುದು ಪ್ರತಿಯೊಬ್ಬ ಯುವಕ ಯುವತಿಯರು ಕನಸು ಕಾಣುತ್ತಾರೆ. ಅದೇ ಕನಸು ಹೊತ್ತು ಊರು-ಮನೆ ತೊರೆದು ದೂರದ ನಗರಗಳಲ್ಲಿ ಅಧ್ಯಯನಶೀಲರಾಗಿರುತ್ತಾರೆ.
ಆದರೆ ಸರಕಾರಿ ನೌಕರಿ ಎಂಬುದು ಎಲ್ಲರಿಗೂ ಸುಲಭವಾಗಿ ಸಾಧ್ಯವಾಗುವ ಮಾತಲ್ಲ..
ಹೀಗಾಗಿ ಅದೇಷ್ಟೋ ಜನರಿಗೆ ಅದೊಂದು ಕನಸಾಗಿಯೇ ಉಳಿಯುತ್ತದೆ. ಆದರೆ ಇಲ್ಲೊಬ್ಬ ಯುವಕ ಮಾತ್ರ ಒಂಭತ್ತು ಸರ್ಕಾರಿ ಹುದ್ದೆಗಳ ದಾಖಲಾತಿ ಪರಿಶೀಲನೆಗೆ ಹಾಜರಾಗಿ ಆ ಪೈಕಿ ಏಳು ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಅವರ ಹೆಸರೇ ಬಸವರಾಜ ಕ್ಯಾಮನ್ನವರ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕರ್ಲಟ್ಟಿ ಗ್ರಾಮದ ನಿವಾಸಿಯಾಗಿದ್ದು, ದಿ.ಸಿದ್ದಪ್ಪ-ಶೋಭಾ ದಂಪತಿಯ ಕಿರಿಯ ಮಗ. ಇವರದ್ದು ಬಡ ಕುಟುಂಬವಾಗಿದ್ದು, ದುಡಿಯಲು ಸ್ವಂತ ಜಮೀನು ಇಲ್ಲದ ಕಾರಣ ಗ್ರಾಮದ ಮಾಲೀಕರ ಜಮೀನಿನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ ಅಣ್ಣಪ್ಪ, ಬಾಳಾಸಾಬ, ಬಸವರಾಜ ಮೂವರು ಗಂಡು ಮಕ್ಕಳು. ಮೂವರು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವುದರ ಜೊತೆ-ಜೊತೆಗೆ ದನಕರುಗಳನ್ನು ಮೇಯಿಸುವುದು, ತಮಗೆ ಸಾಧ್ಯವಾದಷ್ಟು ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವುದರ ಮೂಲಕ ತಂದೆ-ತಾಯಿಯ ಕಷ್ಟದ ದುಡಿಮೆಯಲ್ಲಿ ತಾವು ಭಾಗಿಯಾಗುತ್ತಿದ್ದರು. ತಂದೆ-ತಾಯಿಯ ಕಷ್ಟದ ದುಡಿಮೆ ಹಾಗೂ ಆ ಮೂವರು ಮಕ್ಕಳ ಕಠಿಣ ಪರಿಶ್ರಮದಿಂದ ಇವತ್ತು ಮೂರು ಜನ ಮಕ್ಕಳು ಸರ್ಕಾರಿ ಹುದ್ದೆಗಳನ್ನು ಪಡೆದಿದ್ದಾರೆ. ಕಿರಿಯ ಮಗನಾದ ಬಸವರಾಜ ಏಳು ಹುದ್ದೆಗಳಿಗೆ ಆಯ್ಕೆಯಾಗಿದ್ದು,ತನ್ನ ಪ್ರಾಥಮಿಕ ಶಿಕ್ಷಣವನ್ನು ಕರ್ಲಟ್ಟಿ ಗ್ರಾಮದಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಸಮೀಪದ ಹಲ್ಯಾಳ ಗ್ರಾಮದಲ್ಲಿ, ಪಿಯುಸಿ ಶಿಕ್ಷಣವನ್ನು ಅಥಣಿಯಲ್ಲಿ ಸೈಕಲ್ ಮೇಲೆ (16 ಕೀ.ಮಿ) ಹೋಗಿ ಉನ್ನತ ಶಿಕ್ಷಣವನ್ನು ಪಡೆದರು. ಹಿರಿಯ ಮಗ ಅಣ್ಣಪ್ಪ ಅಥಣಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಾಗೂ ಇನ್ನೋರ್ವ ಮಗ ಬಾಳಾಸಾಬ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಸವರಾಜ ಏಳು ಹುದ್ದೆಗಳಿಗೆ ಆಯ್ಕೆಯಾಗಿದ್ದು ಸತತ ಪರಿಶ್ರಮವಿದ್ದರೆ ಒಂದಲ್ಲ ಅಂತಹ ಹಲವು ಹುದ್ದೆಗಳನ್ನು ಪಡೆಯಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.
*ಕನ್ನಡ ಭಾಷಾ ಶಿಕ್ಷಕ(ಪ್ರೌಢಶಾಲಾ ವಿಭಾಗ-ಮೊರಾರ್ಜಿ),
*ಸಮಾಜ ವಿಜ್ಞಾನ ಶಿಕ್ಷಕ(ಪ್ರೌಢಶಾಲಾ ವಿಭಾಗ-ಮೊರಾರ್ಜಿ)
*ಎಫ್ ಡಿಎ(ಕಂಪ್ಯೂಟರ್ ಆಪರೇಟರ್) *ಹಾಸ್ಟೆಲ್ ಸುಪೀರಿಡೆಂಟ
*ಎಫ್ ಡಿ ಎ
*ಎಸ್ ಡಿಎ
*ಜಿಪಿಟಿ- ಸಮಾಜ ವಿಜ್ಞಾನ ಶಿಕ್ಷಕ ಹೀಗೆ ಏಳು ಹುದ್ದೆಗಳನ್ನು ಪಡೆದಿದ್ದು, ಪ್ರಸ್ತುತ ಕೆ ಎಚ್ ಪಿ ಎಸ್ ಯಕ್ಕಂಚಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಸಾಧನೆಗೆ ಗ್ರಾಮದ ಜನರು, ಸ್ನೇಹಿತರು,ವಿದ್ಯೆ ಕಲಿಸಿದ ಶಿಕ್ಷಕರು, ಬಂಧುಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಾಧನೆಗೆ ಬಡತನ ಎಂಬುದು ನೆಪವಾಗಬಾರದು. ನಿರಂತರ ಶ್ರಮ ಮತ್ತು ಸತತ ಅಧ್ಯಯನವಿದ್ದರೆ ಸವಾಲುಗಳನ್ನೇ ಸದಾವಕಾಶಗಳನ್ನಾಗಿ ಬದಲಾಯಿಸಿಕೊಳ್ಳಬಹುದು ಎಂದು
ಬಸವರಾಜ ಕ್ಯಾಮನ್ನವರ ಹೇಳುತ್ತಾರೆ.