ಇತ್ತೀಚಿನ ಸುದ್ದಿ
ಫೆ.25: ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಂಭ್ರಮ; ವಿದ್ಯಾ ಪ್ರೋತ್ಸಾಹ ಧನ ವಿತರಣೆ
24/02/2023, 13:54
ಬಂಟ್ವಾಳ(reporterkarnataka.com):
ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಮತ್ತು ಜನ್ಮ ಶತಾಬ್ದಿ ಆಚರಣೆ ಸಮಿತಿ ವತಿಯಿಂದ ಡಾ. ಅಮ್ಮೆಂಬಳ ಬಾಳಪ್ಪರ ಜನ್ಮಶತಾಬ್ದಿ ಸಂಭ್ರಮ ಫೆ. 25ರಂದು ಬೆಳಗ್ಗೆ 10ರಿಂದ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಗೌರವಾಧ್ಯಕ್ಷ ಡಿ. ಚಂದಪ್ಪ ಮೂಲ್ಯ ಉಪ್ಪಿನಂಗಡಿ ತಿಳಿಸಿದರು.
ಗುರುವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಾಳಪ್ಪನವರು ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ, ಭೂ ನ್ಯಾಯ ಮಂಡಳಿ ನೇತಾರ, ಶಿಕ್ಷಕ, ಪತ್ರಕರ್ತ, ಆಯುರ್ವೇದ ವೈದ್ಯ, ಸಹಕಾರಿ ಬ್ಯಾಂಕ್ ಸ್ಥಾಪಕಾಧ್ಯಕ್ಷರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡೀಸ್ ಅವರ ರಾಜಕೀಯ ಗುರುವಾಗಿದ್ದ ಅವರು ಗಾಂಧಿವಾದಿಯಾಗಿ ತುಳು ಸಿರಿ ಎನ್ನುವ ತುಳು ಭಾಷೆಯ ಮೊದಲ ಪತ್ರಿಕೆ, ಮಿತ್ರ ಎನ್ನುವ ಕನ್ನಡ ಪತ್ರಿಕೆಯನ್ನು ಪ್ರಾರಂಭಿಸಿ ಪತ್ರಿಕಾ ಕ್ಷೇತ್ರದಲ್ಲೂ ಮಿಂಚಿದ್ದರು. ಎಷ್ಟೇ ಎತ್ತರಕ್ಕೇರಿದರೂ ಹಮ್ಮು ಬಿಮ್ಮುಗಳಿಲ್ಲದೆ ಬಾಳಿದ್ದು ಇವರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಫೆ. 25ರಂದು ಬೆಳಗ್ಗೆ 9 ಗಂಟೆಗೆ ಅಮ್ಮೆಂಬಳ ಬಾಳಪ್ಪ ಅವರ ಭಾವಚಿತ್ರದ ಟ್ಯಾಬ್ಲೊ ನಗರ ಪ್ರದಕ್ಷಿಣೆ ನಡೆಯಲಿದ್ದು, 9.30ಕ್ಕೆ ಬಿಸಿರೋಡ್ ನಾರಾಯಣಗುರು ವೃತ್ತದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. 9.45ಕ್ಕೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರಕ್ಕೆ ಚಾಲನೆ ದೊರೆಯಲಿದೆ. 10 ಗಂಟೆಗೆ ರಾಜ್ಯಸಭೆ ಸದಸ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮ ಉದ್ಘಾಟಿ ಸಲಿದ್ದಾರೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಧಾನಸಭೆ ಮಾಜಿ ಮುಖ್ಯ ಸಚೇತಕ ವೈ.ಎಸ್.ವಿ. ದತ್ತಾ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ತೆಂಕನಿಡಿಯೂರು ಕಾಲೇಜು ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್ ಭಾಗವಹಿಸಲಿದ್ದಾರೆ. ಸಮಿತಿ ಗೌರವಾಧ್ಯಕ್ಷ ಆನಂದ ಅಮ್ಮೆಂಬಳ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಧಕರಿಗೆ ಸಮ್ಮಾನ, ವಿಶೇಷ ಸಂಚಿಕೆ ಬಿಡುಗಡೆ, ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹಧನ ವಿತರಣೆ ಮೊದಲಾದ ಕಾರ್ಯಕ್ರಮಗಳು ಇದೇ ವೇಳೆ ನಡೆಯಲಿದೆ ಎಂದರು.ಪ್ರತಿಷ್ಠಾನದ ಕಾರ್ಯದರ್ಶಿ ಉಮೇಶ್ ಪಿ. ಕೆ. ನಾಗಲಚ್ಚಿಲು, ಕೋಶಾಧಿಕಾರಿ ರವೀಂದ್ರನಾಥ್ ಉಪಸ್ಥಿತರಿದ್ದರು.