ಇತ್ತೀಚಿನ ಸುದ್ದಿ
ಭಾರತ ವಿಶ್ವಗುರುವಾಗಲೂ ಗುರುಕುಲಗಳ ಆಧ್ಯಾತ್ಮಿಕ ವೈಜ್ಞಾನಿಕ ಶಿಕ್ಷಣ ವ್ಯವಸ್ಥೆಯಿಂದ ಸಾಧ್ಯ: ಡಾ. ಟಿ.ಜಿ. ಸೀತಾರಾಮ್
20/02/2023, 00:28
ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ
info.reporterkarnataka@gmail.com
ಭಾರತ ವಿಶ್ವಗುರುವಾಗಲು ಇಂತಹ ಗುರುಕುಲಗಳು ಆಧ್ಯಾತ್ಮ ಮತ್ತು ವೈಜ್ಞಾನಿಕ ತಳಹದಿಯ ಶಿಕ್ಷಣದಿಂದ ಮಾತ್ರ ಸಾಧ್ಯ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುವ ಮೊದಲೇ ತಂತ್ರಜ್ಞಾನ ಮೇಳವನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸಾಹ ಮೂಡಿಸಲಾಗುತ್ತಿದೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ನ ಅಧ್ಯಕ್ಷರಾದ ಡಾ. ಟಿ. ಜಿ. ಸೀತಾರಾಮ್ ಅಭಿಪ್ರಾಯ ಪಟ್ಟರು.
ಅವರಿಂದು ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ “ಪಟ್ಟಾಭಿಷೇಕ ದಶಮಾನೋತ್ಸವ”, ಎರಡು ದಿನಗಳ ರಾಜ್ಯಮಟ್ಟದ ‘ಜ್ಞಾನ-ವಿಜ್ಞಾನ-ತಂತ್ರಜ್ಞಾನ’ ಮೇಳ-2023 ಹಾಗೂ “ವಿಜ್ಞಾತಂ ಪ್ರಶಸ್ತಿ” ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಪಾನ್ ಹಾಗೂ ಇತರ ದೇಶಗಳಂತೆ ತಮ್ಮ ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣದ ಕಲಿಕೆಗೆ ಸಹಾಯವಾಗುವಂತೆ ಸರ್ಕಾರದ ಅನುಮತಿಯೊಂದಿಗೆ ನಮ್ಮ ಪರಿಷತ್ತಿನ ವತಿಯಿಂದ 13 ಭಾಷೆಗಳಲ್ಲಿ ಪುಸ್ತಕಗಳು ಸಿದ್ಧವಾಗಿವೆ ಎಂದು ತಿಳಿಸುತ್ತಾ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ವಿವಿಧ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.
ಸಮಾರಂಭದ ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ವಿಜ್ಞಾನಕ್ಕೆ ತಂತ್ರಜ್ಞಾನವೇ ಅನ್ವಯಿಕ ವಿಧಾನವಾಗಿದೆ, ಆದರೆ ಸಂಶೋಧನಾ ಪ್ರಕ್ರಿಯೆಗಳು ಬದಲಾಗಬೇಕಾಗಿದೆ ಎಂದರು.
ದೇಶದ ಖ್ಯಾತ ವಿಜ್ಞಾನಿ ಡಾ. ರಾಮಾನುಜನ್ ರವರ ಆದರ್ಶ ವೈಜ್ಞಾನಿಕ ತುಡಿತವನ್ನು ಸ್ಮರಿಸುತ್ತಾ , ತಿಳುವಳಿಕೆಗಾಗಿ ಇರುವ ವಿಜ್ಞಾನವನ್ನು ಜೀವನಕ್ಕಾಗಿ ಬಳಸಿ ಎಂದು ಕರೆನೀಡಿದರು. ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಯವರ ಪಟ್ಟಾಭಿಷೇಕ ವಾರ್ಷಿಕೋತ್ಸವಕ್ಕೆ ಜಾನಪದ ಕಲಾಮೇಳವನ್ನು ಆಯೋಜಿಸಿ, ಅವರು ತೋರಿದ ಮಾರ್ಗದಲ್ಲಿ ಮುನ್ನಡೆದು ಜ್ಞಾನ-ವಿಜ್ಞಾನ-ತಂತ್ರಜ್ಞಾನ ಮೇಳವನ್ನು ರೂಪಿಸಿ, ಇಂದು ದಶಮಾನೋತ್ಸವನ್ನು ಆಚರಿಸಲಾಗುತ್ತದೆ ಎಂದು ಬಾಲಗಂಗಾಧರನಾಥ ಸ್ವಾಮೀಜಿಯವರ ಮೊದಲುಗಳನ್ನು ಬಣ್ಣಿಸಿದರು.
ತುಮಕೂರಿನ ಸುಕ್ಷೇತ್ರ ಹಿರೇಮಠದ ಪೂಜ್ಯರಾದ ಡಾ. ಶಿವಾನಂದ ಶಿವಾಚಾರ್ಯರು ಮಾತನಾಡಿ ಇಂದಿನ ಯುವಜನತೆಯ ಪ್ರತಿಭಾನ್ವೇಷಣೆಗಾಗಿ ಇಂತಹ ತಂತ್ರಜ್ಞಾನ ಮೇಳಗಳು ತುಂಬಾ ಉಪಯುಕ್ತ ವಾಗುತ್ತಿವೆ. “ನಹಿ ಜ್ಞಾನೇನ ಸದೃಶಂ” ಎಂಬ ಸೂಕ್ತಿಗೆ “ವಿಜ್ಞಾನ ತಂತ್ರಜ್ಞಾನೇನ ಸದೃಶಂ” ಎಂಬ ಹೊಸ ಆಯಾಮವನ್ನು ಸೇರಿಸುವುದು ಪ್ರಸ್ತುತ ಸಂದರ್ಭದಲ್ಲಿ ಸೂಕ್ತವೆನಿಸುತ್ತದೆ ಎಂದು ತಿಳಿಸಿದರು. ಸಾತ್ವಿಕ ಮಾತೃತ್ವದ ಆಧ್ಯಾತ್ಮಿಕ ಗುರುಗಳು ಧರಿಸುವ ಕಾವಿಯ ಮಹತ್ವವನ್ನು ವಿವರಿಸಿದರು.
ಮಾಜಿ ಸಚಿವ ಎನ್. ಚಲುವರಾಯಸ್ವಾಮಿ, ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ, ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ, ದೆಹಲಿ ತಂತ್ರಜ್ಞಾನ ಕಛೇರಿಯ ಪ್ರತಾಪ್ ಸಿಂಗ್ ದೇಸಾಯಿ, ಐಎಎಸ್ ಅಧಿಕಾರಿ ಜಯರಾಂ ರಾಯಪುರ, ಕೆಪಿಎಸ್ಸಿ ಸದಸ್ಯ ಡಾ.ಪ್ರಭುದೇವ್, ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ ಎ ಶೇಖರ್, ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎನ್ ಎಸ್ ರಾಮೇಗೌಡ, ಡಾ. ಎ ಟಿ ಶಿವರಾಮು, ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಎಂ ಜಿ ಶಿವರಾಮು, ಡಾ. ಬಿ ರಮೇಶ್, ಸೇರಿದಂತೆ ನಾಡಿನ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಇಲಾಖಾ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಈ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ನಾಡಿನ ವಿವಿಧ ಕಾಲೇಜುಗಳಿಂದ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮಾಡೆಲ್ ಗಳೊಂದಿಗೆ ಭಾಗವಹಿಸಿದ್ದರು.