ಇತ್ತೀಚಿನ ಸುದ್ದಿ
ಬಜೆಟ್ ನಲ್ಲಿ ಪ್ರಸ್ತಾಪಿಸದ ನಾರಾಯಣ ಗುರು ಅಭಿವೃದ್ಧಿ ಪ್ರಾಧಿಕಾರ: ಬಿಲ್ಲವ ಮುಖಂಡರ ತೀವ್ರ ಆಕ್ರೋಶ; ಹೋರಾಟದ ಎಚ್ಚರಿಕೆ
17/02/2023, 21:33
ಮಂಗಳೂರು(reporterkarnataka.com): ರಾಜ್ಯ ಬಜೆಟ್ ನಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮದ ಪ್ರಸ್ತಾಪ ಮಾಡದೆ ಬಿಲ್ಲವರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದೀರಿ. ರಾಜ್ಯದಲ್ಲಿ 90 ಲಕ್ಷ ಬಿಲ್ಲವರಿದ್ದಾರೆ. ಇದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸುತ್ತೀರಿ ಎಂದು ಬಿಲ್ಲವ ಮುಖಂಡರಾದ ಪದ್ಮರಾಜ್ ಮತ್ತು ಸತ್ಯಜಿತ್ ಸುರತ್ಕಲ್ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನಾರಾಯಣಗುರು ಅಭಿವೃದ್ಧಿ ನಿಗಮ ಮಾಡುತ್ತೇವೆ ಎಂದು ಹೇಳಿ ಮುಖ್ಯಮಂತ್ರಿ ಬೊಮ್ಮಾಯಿ ಮಾತು ತಪ್ಪಿದ್ದಾರೆ ಎಂದು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಇಬ್ಬರು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಜ. 29 ರಂದು ಬಿಲ್ಲವರನ್ನು ಒಟ್ಟು ಸೇರಿಸಿ ಒಂದು ಲಕ್ಷ ಜನರ ಸಮಾವೇಶ ಮಾಡಲು ನಿರ್ಧಾರ ಮಾಡಿದ್ದೆವು. ಹಕ್ಕೊತ್ತಾಯ ಸಭೆಗೆ ಮುಂದಾಗಿದ್ದ ನಮ್ಮನ್ನು ಬೆಂಗಳೂರಿಗೆ ಕರೆಸಿ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಯ ಭರವಸೆ ನೀಡಿದ್ದೀರಿ. ಅಲ್ಲದೆ, ಇತರ 14 ಬೇಡಿಕೆಗಳನ್ನು ಪರಿಗಣಿಸುವುದಾಗಿ ಮಾತುಕೊಟ್ಟಿದ್ದೀರಿ. ಆದರೆ ನಮ್ಮ ಯಾವುದೇ ಬೇಡಿಕೆಯ ಬಗ್ಗೆಯೂ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ. ನಮ್ಮನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದೀರಿ. ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಜತೆಗೆ ಸಚಿವ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಇದ್ದು ಭರವಸೆಯನ್ನು ನೀಡಿದ್ದೀರಿ. ನೀವೆಲ್ಲ ಮಾತು ತಪ್ಪಿದ್ದೀರಿ. ನಮ್ಮ ಹೋರಾಟ ಕೈಬಿಡಲ್ಲ. ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಸತ್ಯಜಿತ್ ಸುರತ್ಕಲ್ ಮಾತನಾಡಿ, 18 ವರ್ಷಗಳ ಹಿಂದೆ ಶೇಂದಿ ನಿಷೇಧ ಆದಾಗಲೇ ಅಭಿವೃದ್ಧಿ ನಿಗಮ ಮಾಡಬೇಕಿತ್ತು. ಅಂದು ಅಧಿಕಾರದಲ್ಲಿದ್ದವರು ಮುಂದಿನ ಬಜೆಟ್ ನಲ್ಲಿ ನಿಗಮ ಘೋಷಿಸುವುದಾಗಿ ಹೇಳಿದ್ದರು. ಆದರೆ ಅದನ್ನು ಮಾಡಿಲ್ಲ. ಈ ಬಾರಿ ನಾವು ಹಕ್ಕೊತ್ತಾಯ ಮಾಡಿದ್ದೆವು. ಬಿಲ್ಲವ ಸಮಾಜದ ಪರವಾಗಿ ಪ್ರಣವಾನಂದ ಸ್ವಾಮೀಜಿ ಮಂಗಳೂರಿನಿಂದ ಉಡುಪಿ, ದಾವಣಗೆರೆ ಮೂಲಕ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದಾರೆ. ಮೊನ್ನೆ ಸಮಾರೋಪದಲ್ಲಿ ಸಚಿವರೇ ಬಂದು ಬೇಡಿಕೆ ಈಡೇರಿಸುವ ಹೇಳಿಕೆ ನೀಡಿದ್ದರು. ಈಗ ಬಜೆಟ್ ನಲ್ಲಿ ಹಣಕಾಸು ಹೊಂದಿಕೆ ಮಾಡಿಕೊಂಡು ಘೋಷಣೆ ಮಾಡಬೇಕಿತ್ತು. ಇಲ್ಲಿ ಸಾಧ್ಯವಾಗದ್ದು ಮುಂದೆ ಮಾಡುವ ಭರವಸೆ ಉಳಿದಿಲ್ಲ.
ನಾರಾಯಣ ಗುರು ವಸತಿ ಶಾಲೆ ಎಲ್ಲ ಹಿಂದುಳಿದ ಸಮಾಜಕ್ಕೂ ಸಂಬಂಧಿಸಿದ್ದು. ಅದ್ದರಿಂದ ಬಿಲ್ಲವರ ಏಳಿಗೆ ಆಗಲ್ಲ. ಸಮಾಜದ ಶೈಕ್ಷಣಿಕ, ಸಾಮಾಜಿಕ ಉನ್ನತಿಗಾಗಿ ಅಭಿವೃದ್ಧಿ ನಿಗಮವೇ ಬೇಕು ಎಂದರು.
2 ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಒತ್ತಾಯ ಮಾಡಿಕೊಂಡು ಬಂದಿದ್ದೇವೆ. ಶಿವಮೊಗ್ಗ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡುತ್ತೇವೆಂದು ಹೇಳಿ ಒಂದೇ ದಿನದಲ್ಲಿ ಸಂಪುಟದಲ್ಲಿ ನಿರ್ಣಯ ಮಾಡುತ್ತೀರಿ. ಅಲ್ಲಿ ಒಂದೇ ದಿನದಲ್ಲಿ ಸಾಧ್ಯವಾಗುವುದು ಇಲ್ಲಿ ಏಕೆ ಸಾಧ್ಯವಾಗಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತನ್ನ ಹೆಸರು ಬೇಡವೆಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಯಾರದ್ದೇ ಆಗಲೀ, ಜೀವಂತ ಇರುವಾಗ ಹೆಸರಿಡುವ ಸಂಪ್ರದಾಯ ಇಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್ . ಬಂಗಾರಪ್ಪ ಅವರ ಹೆಸರಿಡಲು ಒತ್ತಾಯ ಮಾಡಿದ್ದೇವೆ.
ಫೆ.24 ರ ವರೆಗೆ ಬಜೆಟ್ ಅಧಿವೇಶನ ಇದ್ದು, ಬಿಲ್ಲವರಿಗೆ ಅಭಿವೃದ್ಧಿ ನಿಗಮ ಘೋಷಿಸಿ 500 ಕೋಟಿ ಅನುದಾನ ನೀಡಬೇಕು. ಇಲ್ಲದೇ ಇದ್ದರೆ ರಾಜ್ಯದಾದ್ಯಂತ ಹೋರಾಟ ಎಬ್ಬಿಸುವ ಶಕ್ತಿಯಿದೆ. ನಮ್ಮ ಸಮುದಾಯದ ಬಗ್ಗೆ ತಿರಸ್ಕಾರದ ಭಾವನೆಯಿದ್ದರೆ ತೆಗೆದು ಹಾಕಿ. ನಂಬಿಕೆ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ. ಸಂಘಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದೀರಿ. ಈ ಭಾಗದ ಬಿಜೆಪಿ ಶಾಸಕರು ಬಿಲ್ಲವ ಸಂಘಟನೆಯನ್ನು ಒಡೆಯಲು ಸಮುದಾಯದ ಮುಖಂಡರನ್ನು ನಮ್ಮೊಂದಿಗೆ ಸೇರದಂತೆ ಮಾಡುತ್ತಿದ್ದಾರೆ.
ಹಾಗಿದ್ದರೂ, ಬಿಲ್ಲವ ಸಮಾಜ ತಮ್ಮನ್ನು ತುಳಿದಲ್ಲಿ ಸೂಕ್ತ ಉತ್ತರ ನೀಡಲಿದ್ದೇವೆ. 5 ರಂದು ಸಭೆಯಲ್ಲಿ ಹೇಳಿದ್ದನ್ನೇ ಸಮುದಾಯದ ಕೆಲವು ಮುಖಂಡರು ಅಭಿವೃದ್ಧಿ ನಿಗಮಕ್ಕೆ ಒಪ್ಪಿಗೆ ಎಂದು ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಸಚಿವ ಸುನಿಲ್ ಕುಮಾರ್ ಕೂಡ ಪೋಸ್ಟ್ ಹಾಕಿದ್ದರು. ಅವರೆಲ್ಲ ಇವತ್ತು ಮಾತು ತಪ್ಪಿದ್ದಕ್ಕೆ ಏನು ಹೇಳ್ತಾರೆಂದು ನೋಡಲು ಬಯಸುತ್ತೇವೆ ಎಂದು ಹೇಳಿದರು. ಅಕ್ಷಿತ್ ಸುವರ್ಣ, ದೇವೇಂದ್ರ ಪೂಜಾರಿ, ಜಯ ಸುವರ್ಣ, ರಾಜೇಂದ್ರ ಉಪಸ್ಥಿತರಿದ್ದರು.














