ಇತ್ತೀಚಿನ ಸುದ್ದಿ
ಕೇಂದ್ರ ಗೃಹ ಸಚಿವ ಅಮಿತ್ ಶಾ 11ರಂದು ಪುತ್ತೂರಿಗೆ: ಭದ್ರತೆ ಸಹಿತ ಸಕಲ ಸಿದ್ಧತೆ; ನೋಡೆಲ್ ಅಧಿಕಾರಿ ನೇಮಕ
02/02/2023, 22:17
ಮಂಗಳೂರು(reporterkarnataka.com): ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊದ
ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಫೆ.11ರಂದು ಪುತ್ತೂರಿಗೆ ಆಗಮಿಸಿ, ಮಧ್ಯಾಹ್ನ 2.30ಕ್ಕೆ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮಾಚರಣೆಗೆ ಚಾಲನೆ ನೀಡುವರು.
ಈ ಸಂದರ್ಭದಲ್ಲಿ ಅವರು ವಿವಿಧ ಶಿಲಾನ್ಯಾಸ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ, ಈ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇ ಸಂಬಂಧಿತ ಕಾಮಗಾರಿ ನಡೆಯುತ್ತಿರುವುದರಿಂದ ಅವರು ಹೈದರಾಬಾದ್‍ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು 1.10 ಗಂಟೆಗೆ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ 1.25ಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಹೊರಟು 1.50ಕ್ಕೆ ಈಶ್ವರಮಂಗಲ ಹೆಲಿಪ್ಯಾಡ್‍ನಲ್ಲಿ ಇಳಿಯುವರು. 1.30ರಿಂದ 2.30ರ ವರೆಗೆ ಈಶ್ವರಮಂಗಲದಲ್ಲಿ ಇದ್ದು, ಭಾರತ್‍ಮಾತಾ ಮಂದಿರ ಉದ್ಘಾಟನೆ, ಪಂಚಮುಖಿ ಆಂಜನೇಯ ದೇವಸ್ಥಾನ ಸಂದರ್ಶಿಸುವರು. ಅಲ್ಲಿಂದ 2.35ಕ್ಕೆ ಹೆಲಿಕಾಪ್ಟರ್ ನಲ್ಲಿ
ಹೊರಟು 2.45ಕ್ಕೆ ಪುತ್ತೂರಿನ ಫಿಲೋಮಿನಾ ಕಾಲೇಜಿನ ಹೆಲಿಪ್ಯಾಡ್‍ಗೆ ಆಗಮಿಸುವರು. ಅಲ್ಲಿಂದ ರಸ್ತೆ ಮೂಲಕ ತೆಂಕಿನ ಬೈಪಾಸ್‍ನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಸಮಾವೇಶಕ್ಕೆ ತೆರಳುವರು.
ಪುತ್ತೂರಿನಲ್ಲಿ ಸಂಜೆ 3 ಗಂಟೆಯಿಂದ 5.30ರ ವರೆಗೆ ಇರಲಿದ್ದು, ಈ ವೇಳೆ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಚಾಲನೆ, ವಿವಿಧ ಉತ್ಪನ್ನಗಳ ಉದ್ಘಾಟನೆ, ಕಾಮಗಾರಿ ಶಿಲಾನ್ಯಾಸ, ಕ್ಯಾಂಪ್ಕೊ ಚಾಕಲೇಟ್ ಫ್ಯಾಕ್ಟರಿ ಭೇಟಿ ನೀಡುವರು.
5.30ಕ್ಕೆ ಹೆಲಿಕಾಪ್ಟರ್ ಮೂಲಕ ಕಣ್ಣೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ನಿರ್ಗಮಿಸುವರು.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಮಾತನಾಡಿ, ಕೇಂದ್ರ ಗೃಹ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ಆಗಮಿಸಲು ಅನುಕೂಲವಾಗುವಂತೆ ಈಗಾಗಲೇ ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳಗಳನ್ನು ಪರಿಶೀಲಿಸಲಾಗಿದೆ, ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವಂತೆ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಲಾಗಿದೆ, ಕ್ಯಾಂಪ್ಕೋ ವತಿಯಿಂದ ಕಾರ್ಯಕ್ರಮಕ್ಕೆ ಆಗುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಜಿಲ್ಲಾಡಳಿತ ವತಿಯಿಂದ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗುವುದು, ಭದ್ರತೆ ಹಾಗೂ ರಸ್ತೆ ಸುರಕ್ಷತೆಗಳನ್ನು ಪಾಲಿಸಲು ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಸರ್ಕಾರದ ಕಾರ್ಯಕ್ರಮವಾಗಿರುವುದರಿಂದ ಶಿಷ್ಟಚಾರದ ಅನ್ವಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು, ಕೃಷಿ, ಸಹಕಾರ ಇಲಾಖೆ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿ ಇಲಾಖೆಗಳಿಗೆ ತಿಳಿಸಲಾಗಿದೆ ಎಂದವರು ಹೇಳಿದರು.