ಇತ್ತೀಚಿನ ಸುದ್ದಿ
ಫಾಝೀಲ್ ಕೊಲೆ ಪ್ರಕರಣ ಮರು ತನಿಖೆಯಾಗಲಿ; ಹಿಂಸೆಗೆ ಪ್ರಚೋದಿಸುವವರ ಗಡಿಪಾರು ಮಾಡಿ: ಪ್ರತಿಪಕ್ಷದ ಉಪ ನಾಯಕ ಖಾದರ್ ಆಗ್ರಹ
30/01/2023, 17:51

ಮಂಗಳೂರು(reporterkarnataka.com) ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಯ ಪ್ರಕರಣದ ಮರು ತನಿಖೆ ಮಾಡಬೇಕು. ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡುವವರನ್ನು ಕೂಡಲೇ ಗಡೀಪಾರು ಮಾಡಬೇಕು. ಹಿಂಸೆಗೆ ಪ್ರೇರೇಪಣೆ ನೀಡುವಂತಹವರಿಗೆ ಕಾನೂನು ರೀತ್ಯ ಶಿಕ್ಷೆ ಆಗಬೇಕು ಎಂದು ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಧರ್ಮಗಳ ನಡುವೆ ಅವಿಶ್ವಾಸ ಮೂಡಿಸುವ, ಕೊಲೆಗೆ ಪ್ರೇರಣೆ ನೀಡುವ ಹೇಳಿಕೆ ನೀಡುವುದು ಸಮಾಜಕ್ಕೆ ಅಪಾಯಕಾರಿ. ಇಂತಹ ಹೇಳಿಕೆ ನೀಡುವವರು ನಿಜವಾದ ದೇಶದ್ರೋಹಿಗಳು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ
ಎಲ್ಲ ಕೊಲೆ ಪ್ರಕರಣಗಳ ನೈಜ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಹೆಜ್ಜೆ ಇಡಲಾಗುತ್ತದೆ ಎಂದರು.
ಸಮಾಜವೂ ಸೌಹಾರ್ದವಾಗಿ ಇರಬೇಕು. ಯಾರದ್ದೂ ಕೂಡ ಕೊಲೆ ಆಗಬಾರದು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಯಾವುದೇ ಯುವಕರ ಕೊಲೆ, ಸಾವು ನೋವುಗಳು ಆಗದಂತಹ ಸಮಾಜ ನಿರ್ಮಾಣ ಮಾಡಬೇಕು. ರಾಜಕೀಯ ಮತ್ತು ವ್ಯಾಪಾರವೇ ಬೇರೆ, ಆದರೆ ಕೊಲೆಗೆ ಪ್ರೇರೇಪಣೆ ನೀಡುವಂತಹ ಬಹಿರಂಗ ಹೇಳಿಕೆ ನಿಜಕ್ಕೂ ಆತಂಕಕಾರಿ ಆಗಿದೆ ಎಂದು ಅವರು ನುಡಿದರು.
ಉಳ್ಳಾಲ ಕ್ಷೇತ್ರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದ್ದಾರೆ. ಶಾಂತಿ ಕದಡುವ ಕೃತ್ಯ ನಿರಂತರ ನಡೆಯುತ್ತಲೇ ಇದೆ. ಆದರೆ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ. ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆ ಮುಂದಾಗಬೇಕು. ಸತ್ಯಾಂಶ ಜನರಿಗೆ ಗೊತ್ತಾಗಬೇಕು. ವೀರರಾಣಿ ಅಬ್ಬಕ್ಕ, ಚರ್ಚ್, ಮಸೀದಿಗಳು ಇರುವಂತಹ ಕ್ಷೇತ್ರ ಆಗಿದೆ. ಯಾರ ನಡುವೆಯೂ ದ್ವೇಷ ಭಾವನೆ ಇಲ್ಲಿ ಇಲ್ಲ ಎಂದರು.