ಇತ್ತೀಚಿನ ಸುದ್ದಿ
ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್ ಆದಿ ಯೋಗಿ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಹೈಕೋರ್ಟ್ ತಡೆ; ಯಥಾಸ್ಥಿತಿ ಕಾಪಾಡಲು ಸೂಚನೆ
11/01/2023, 19:45

ಚಿಕ್ಕಬಳ್ಳಾಪುರ(reporterkarnataka.com): ಇಲ್ಲಿನ ನಂದಿಬೆಟ್ಟದ ಆವಲಗುರ್ಕಿ ಬಳಿ ನಿರ್ಮಾಣವಾಗುತ್ತಿರುವ ಆದಿಯೋಗಿ ಪ್ರತಿಮೆಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರವು ಇಶಾ ಯೋಗ ಕೇಂದ್ರಕ್ಕೆ ಕಾನೂನು ಬಾಹಿರವಾಗಿ ಜಮೀನು ಮಂಜೂರು ಮಾಡಿದ್ದು, ಇದು ರೈತರ ಬದುಕಿಗೆ ಮತ್ತು ಪರಿಸರಕ್ಕೆ ಹಾನಿ ಮಾಡುತ್ತದೆ ಎಂದು ಆರೋಪಿಸಿ ಜಿಲ್ಲೆಯ ಐವರು ರೈತರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಈ ಆದೇಶ ನೀಡಿದೆ.
ನಂದಿಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದ್ದು, ಇಶಾ ಯೋಗ ಕೇಂದ್ರಕ್ಕೆ ಕಾನೂನು ಬಾಹಿರವಾಗಿ ಕೆರೆ, ಕುಂಟೆ, ಕಂಟಿಗಳು ಹಾಗೂ ಗೋಮಾಳ ವ್ಯಾಪ್ತಿಯ ಜಮೀನನ್ನು ಮಂಜೂರು ಮಾಡಿದೆ. ಇದರ ಸುತ್ತಮುತ್ತಲಿನ ಜಮೀನನ್ನು ಪರಭಾರೆ ಮಾಡಿರುವ ಕಾರಣ ರೈತರ ಬದುಕಿಗೆ ಹಾಗೂ ಪರಿಸರಕ್ಕೆ ಭರಿಸಲಾಗದ ಹಾನಿಯಾಗಲಿದೆ. ಪರಿಸರದ ಸೂಕ್ಷ್ಮ ವಲಯಕ್ಕೆ ಒಳಪಡುವ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಕಾನೂನು ಬಾಹಿರವಾಗಿದ್ದು, ಇಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಆದೇಶಿಸಬೇಕ ಎಂದು ರೈತರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ರೈತರ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಒಕ್ಕೂಟ ಸರ್ಕಾರದ ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇಶಾ ಯೋಗ ಕೇಂದ್ರ ಸೇರಿದಂತೆ ಒಟ್ಟು 16 ಮಂದಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಆದಿಯೋಗಿ ಪ್ರತಿಮೆಯನ್ನು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಜನವರಿ 15 ರಂದು ಉದ್ಘಾಟಿಸಲಿದ್ದರು.