4:22 PM Tuesday30 - April 2024
ಬ್ರೇಕಿಂಗ್ ನ್ಯೂಸ್
ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ… ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ… ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು

ಇತ್ತೀಚಿನ ಸುದ್ದಿ

ಗಡಿ ಅಭಿವೃದ್ಧಿಗೆ ವಿಶೇಷ ಅನುದಾನ: ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

06/01/2023, 21:25

ಹಾವೇರಿ(reporterkarnataka.com): ಗಡಿ ಭಾಗದ ಹಾಗೂ ಗಡಿ ಆಚೆಗಿನ ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಗಡಿ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಲಾಗುವುದು. ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನಿನ ಸ್ವರೂಪ ನೀಡಿ, ಕನ್ನಡಿಗರಿಗೆ ಕೈಗಾರಿಗಳ ಉದ್ಯೋಗದಲ್ಲಿ ಶೇ. 80ರಷ್ಟು ಪ್ರಾಶಸ್ತ್ಯ ನೀಡಲಾಗುವುದು‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.


ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡಿಗರ ಬದುಕು. ಪುರಾತನ, ಪ್ರಾಚನ, ಶ್ರೇಷ್ಠವಾದುದು. ಇಡೀ ಜಗತ್ತಿನಲ್ಲಿ ಕನ್ನಡದ ಸಂಸ್ಕೃತಿ ಅತ್ಯಂತ ಶ್ರೇಷ್ಠ ಮತ್ತು ಪರಂಪರೆ ಹಾಗೂ ಚರಿತ್ರೆ ಇರುವಂಥದ್ದು. ಕನ್ನಡದ ಸಂಸ್ಕೃತಿಗೆ ದೊಡ್ಡ ಶಕ್ತಿ, ಅರ್ಥ, ಭಾವನೆಗಳನ್ನು ತುಂಬಿ ಹಾಗೂ ಬದುಕನ್ನು ಕೊಟ್ಟಿರುವುದು ಕನ್ನಡದ ಸಾಹಿತ್ಯ ಲೋಕ. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದಿದ್ದು ಇದನ್ನು ಗುರುತಿಸಿ ಬೆಳೆಸಿಕೊಂಡು ಹೋಗಬೇಕಾದ್ದು ಈ ಸಮ್ಮೇಳನಗಳ ಉದ್ದೇಶ. ಕನ್ನಡದ ಕಿಚ್ಚನ್ನು ಮತ್ತೊಮ್ಮೆ ಹಚ್ಚಿ, ಕನ್ನಡ ಕಂಪನ್ನು ಎಲ್ಲೆಡೆ ಪಸರಿಸಬೇಕು. ಕನ್ನಡವನ್ನು ಆಳವಾಗಿ ಭಾರತದಲ್ಲಿ ಬಿತ್ತಬೇಕು. ಅದು ಬೆಳೆದು ಹೆಮ್ಮರವಾಗಿ ಬೆಳೆಯಬೇಕು. ಈ ಉದ್ದೇಶಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದರು.

ದೊಡ್ಡರಂಗೇಗೌಡರದ್ದು ದೊಡ್ಡ ಸಾಧನೆ: ತಮ್ಮ ಹೆಸರಿನಂತೆಯೇ ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲಿ ದೊಡ್ಡ ಸಾಧನೆ ಮಾಡಿರುವ ಪ್ರೊ.ದೊಡ್ಡರಂಗೇಗೌಡರು ತಮ್ಮ ಹೆಸರಿಗೆ ಅನ್ವರ್ಥವಾಗುವಂತಹ ವ್ಯಕ್ತಿತ್ವ ಹೊಂದಿದ್ದಾರೆ. ಅವರೊಬ್ಬ ಪರಿಪೂರ್ಣ ಸಾಹಿತಿ. ಮಾನವೀಯತೆಯ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮಾರ್ಮಿಕವಾಗಿ ತಿಳಿಸುವ ಕೆಲಸವನ್ನು ಅವರ ಸಾಹಿತ್ಯ, ಕವಿತೆಗಳಲ್ಲಿ, ಹಾಡುಗಳಲ್ಲಿ ಕಂಡುಬರುತ್ತದೆ. ಸಾಹಿತ್ಯ, ಸಿನಿಮಾ ಮತ್ತು ಇತರ ರಂಗದಲ್ಲಿಯೂ ಖ್ಯಾತಿ ಪಡೆದು ದೊಡ್ಡ ಹೃದಯ ಹೊಂದಿದವರು ಎಂದರು.

ಕನ್ನಡದ ತೇರು: ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿರುವ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರೂ ಕೂಡ ಸಂವೇದನಾಶೀಲ ಕಾವ್ಯದ ಕರ್ತೃವಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ತೇರನ್ನು ಎಳೆದು ಹಾವೇರಿಗೆ ಕೊಟ್ಟು, ಹಾವೇರಿಯಿಂದ ದೊಡ್ಡರಂಗೇಗೌಡರು ರಾಜ್ಯದಲ್ಲಿ ಈ ತೇರನ್ನು ಕೊಂಡೊಯ್ಯಲಿದ್ದಾರೆ ಎಂದರು.

ಕನ್ನಡವನ್ನು ಕಟ್ಟಲು ಆತ್ಮಸಂಕಲ್ಪ:
ಒಂದು ಭಾಷೆ , ಸಂಸ್ಕೃತಿ ಬೆಳೆಯಬೇಕಾದರೆ ನಡೆದು ಬಂದ ದಾರಿಯನ್ನು ಸಿಂಹಾವಲೋಕನ ಮಾಡಬೇಕು. ಇದರಲ್ಲಿ ನಮ್ಮ ಪಾತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಮುಂದಿನ ಭವಿಷ್ಯವನ್ನು ನಿರ್ಮಿಸಲಬೇಕು. ಕನ್ನಡದ ಪರಂಪರೆ ಅತ್ಯಂತ ಶ್ರೀಮಂತ ಪರಂಪರೆ. ಹಾಗೂ ಕನ್ನಡ ಭಾಷೆ ಎಂದಿಗೂ ಬಡವಾಗಿಲ್ಲ. ಶತ ಶತ ಮಾನಗಳವರೆಗೆ, ಸೂರ್ಯ ಚಂದ್ರರು ಇರುವವರೆಗೂ ಕನ್ನಡ ಶ್ರೀಮಂತವಾಗಿ ಬೆಳೆಯುತ್ತಲೇ ಸಾಗುತ್ತದೆ. ಕನ್ನಡಕ್ಕೆ ಆಪತ್ತು ತರುವ ಯಾವುದೇ ಶಕ್ತಿ ಹುಟ್ಟಿಲ್ಲ. ಹುಟ್ಟುವುದೂ ಇಲ್ಲ. ಆದ್ದರಿಂದ ಆತ್ಮವಿಶ್ವಾದಿಂದ, ಆತ್ಮಸಂಕಲ್ಪದಿಂದ ಕನ್ನಡವನ್ನು ಕಟ್ಟಿ ಬೆಳೆಸೋಣ. ಬೆಳವಣಿಗೆಯಲ್ಲಿ ನಮ್ಮದೂ ಕೊಡುಗೆ ಇರಲಿ ಎಂಬ ಭಾವನೆಯಿಂದ ಸಮ್ಮೇಳನವನ್ನು ಪ್ರಾರಂಭ ಮಾಡಬೇಕಿದೆ. ಆದಿ ಕವಿ ರನ್ನ ಪಂಪರಿಂದ ಹಿಡಿದು ಡಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದವರು ಕನ್ನಡಿಗರು. ದೇಶದ ಯಾವುದೇ ರಾಜ್ಯದಲ್ಲಿ ಎಂಟು ಜನ ಜ್ಞಾನಪೀಠ ಪ್ರಶ್ತಸ್ತಿ ಪಡೆದ ದ್ಆಹರಣೆಇಲ್ಲ. ಕನ್ನಡದ ಸಾಹಿತ್ಯದ ತ್ಮಶಕ್ತಿಯನ್ನು ತೋರಿಸುತ್ತದೆ. ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಕನ್ನಡಕ್ಕೆ ಲಭ್ಯವಾಗಿದೆ ಎಂದರು.

ನೀರಾವರಿ ದಶಕ: ಕನ್ನಡ ನಾಡು ಸಂಪದ್ಭರಿತವಾಗಿದೆ. 10 ಕೃಷಿ ವಲಯಗಳು ನಮ್ಮ ನಾಡಿನಲ್ಲಿವೆ, ವರ್ಷದ ಎಲ್ಲಾ ದಿನಗಳಲ್ಲಿಯೂ ಈ ನಾಡಿನಲ್ಲಿ ಒಂದಲ್ಲ ಒಂದು ಬೆಳೆ, ಫಸಲು ಸದಾ ಹಸಿರು ಉಕ್ಕಿಸುತ್ತಿರುತ್ತದೆ. ದುಡಿಯುವ ವರ್ಗ , ರೈತರು, ಕೂಲಿಕಾರರು ಈ ನಾಡನ್ನು ಕಟ್ಟಿದ್ದಾರೆ. ಕಳೆದ ಐದು ವರ್ಷಗಳಲ್ಲಿ 1.5 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ಒಂದು ದಶಕ ನೀರಾವರಿ ದಶಕವಾಗಿರುತ್ತದೆ.ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಬದ್ಧತೆ ನಮ್ಮದಾಗಿದೆ. ಆಹಾರ ಉತ್ಪಾದನೆ ನಮ್ಮ ಸ್ವಾಭಿಮಾನದ ಸಂಪತ್ತು. ದುಡಿಯುವ ವರ್ಗ ರಾಜ್ಯವನ್ನು ಕಟ್ಟುತ್ತಿದೆ. ನಾಡು ಕಟ್ಟುವ ರೈತರಿಗೆ, ಕೂಲಿಕಾರ್ಮಿಕರಿಗೆ, ಕುಶಲಕರ್ಮಿಗಳಿಗೆ ಅಭಿನಂದನೆಗಳು ಎಂದರು.

ದಾರಿದೀಪವಾಗಿರುವ ದಾರ್ಶನಿಕರ ವಚನಗಳು: ಹಾವೇರಿ ಜಿಲ್ಲೆಯ ದಾರ್ಶನಿಕರಾದ ಸರ್ವಜ್ಞನ ವಚನಗಳು ಇಂದಿಗೂ ದಾರಿದೀಪವಾಗಿದೆ. ಕನಕದಾಸರು, ಸಂತಶಿಶುನಾಳ ಶರೀಫರು ಧರ್ಮದ ಚೌಕಟ್ಟನ್ನು ಮೀರಿ ಬದುಕಿಗೆ ಅಧ್ಯಾತ್ಮವನ್ನು ತಂದಿರುವ ಸಂತ. ಪಂಚಾಕ್ಷರಿ ಗವಾಯಿಗಳು, ಹಾನಗಲ್ ಕುಮಾರಸ್ವಾಮಿ, ಗಳಗನಾಥರು, ವಿ.ಕೃ.ಗೋಕಾರರು ಕರ್ನಾಟಕಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಪಾಟೀಲ ಪುಟ್ಟಪ್ಪನವರು, ಚಂದ್ರಶೇಖರ ಪಾಟೀಲರ ಕೊಡುಗೆ ಅಪಾರವಾಗಿದೆ ಎಂದರು.
ಕನ್ನಡಿಗರ ಕೈಗಳಿಗೆ ಕೆಲಸ ನೀಡುವ ಉದ್ಯೋಗ ನೀತಿ: ಕನ್ನಡ ಭಾಷೆಗೆ ಹತ್ತು ಎಲ್ಲ ಕ್ಷೇತ್ರಗಳಲ್ಲಿ ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂಬ ಆಶಯದಿಂದ ಸಮಗ್ರವಾದ ಕಾನೂನನ್ನು ರೂಪಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆದೇಶದಂತೆ ಈಗಲೇ ರಾಜ್ಯದ ಕಾನೂನು ಆಯೋಗವು ಕರಡು ಸಿದ್ಧಪಡಿಸಿದೆ.ಇನ್ನಷ್ಟು ವಿಸ್ತೃತ ಮತ್ತು ವ್ಯಾಪಕ ಚರ್ಚೆಗಳಾದ ಕೂಡಲೇ ಈ ಕಾನೂನು ಜಾರಿಗೊಳ್ಳುತ್ತದೆ. ಕೈಗಾರಿಕೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಪ್ರಾಶಸ್ತ್ಯ ದೊರೆತು ಎಲ್ಲ ಕನ್ನಡಿಗರ ಕೈಗಳಿಗೆ ಕೆಲಸ ನೀಡುವ ಉದ್ಯೋಗ ನೀತಿಯ ತೀರ್ಮಾನವನ್ನು ರಾಜ್ಯದ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗುವುದು ಎಂದರು.

ಗಡಿಭಾಗದ ಹಾಗೂ ಗಡಿಯಾಚೆಗಿನ ಕ‌ನ್ನಡಿಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ:
ಗಡಿಭಾಗದ ಹಾಗೂ ಗಡಿಯಾಚೆಗಿನ ಕ‌ನ್ನಡಿಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.ಅದಕ್ಕಾಗಿ ವಿಶೇಷ ಅನುದಾನ‌ ನೀಡಲಾಗುವುದು. ಮೂಲಭೂತಸೌಕರ್ಯ ಸೇರಿದಂತೆ ಗಡಿಭಾಗಗಳ ಸಂಪೂರ್ಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿಭಾಗದ ಕನ್ನಡಿಗರ ಸಮಸ್ಯೆಗಳನ್ನು ನಿವಾರಿಸುವಂತಹ, ಶಾಲೆಗಳನ್ನು ಉಳಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದರು.

ಕನ್ನಡಿಗರ ಬದುಕನ್ನು ಕಟ್ಟಿಕೊಡುವಂತಹ ವೇದಿಕೆ: ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಗುವ ನಿರ್ಣಯ ಹಾಗೂ ನಿಲುವುಗಳನ್ನು ಸರ್ಕಾರ ಚಾಚೂತಪ್ಪದೇ ಪಾಲಿಸುತ್ತದೆ. ಕನ್ನಡ ಸಾಹಿತ್ಯ ಮತ್ತು ಭಾಷೆಯ ಭವಿಷ್ಯವನ್ನು ಬರೆಯುವಂತಹ , ಕನ್ನಡಿಗರ ಬದುಕನ್ನು ಕಟ್ಟಿಕೊಡುವಂತಹ ವೇದಿಕೆಯಾಗಲಿ. ನವಕರ್ನಾಟಕ ನಿರ್ಮಾಣಕ್ಕೆ ಸಾಹಿತ್ಯ ಸಮ್ಮೇಳನ ಕೊಡುಗೆಯನ್ನು ನೀಡಲಿ. ತಾವೊಬ್ಬ ಕನ್ನಡದ ನಿಯತ್ತಿನ ಸೇವಕ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೆಮ್ಮೆಯಿಂದ ತಿಳಿಸಿದರು.
ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲಕುಮಾರ್,ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ,ಸಂಸದ ಶಿವಕುಮಾರ ಉದಾಸಿ,ಶಾಸಕರಾದ ಅರುಣ ಪೂಜಾರ,ವಿರೂಪಾಕ್ಷಪ್ಪ ಬಳ್ಳಾರಿ,ಶ್ರೀನಿವಾಸ ಮಾನೆ,ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ,ಸಲೀಂ ಅಹ್ಮದ್,ಆರ್.ಶಂಕರ್,ಪ್ರದೀಪ ಶೆಟ್ಟರ್ , ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ,ವಾಕರಸಾಸಂ ಉಪಾಧ್ಯಕ್ಷ ಬಸವರಾಜ ಕೆಲಗಾರ,ಮಾಜಿ ಸಚಿವರಾದ ಬಸವರಾಜ ಶಿವಣ್ಣವರ,ಮನೋಹರ ತಹಸೀಲ್ದಾರ,ರುದ್ರಪ್ಪ ಲಮಾಣಿ ಮತ್ತಿತರರು ವೇದಿಕೆಯಲ್ಲಿದ್ದರು.


ಸ್ವಾಗತ ಸಮಿತಿ ಅಧ್ಯಕ್ಷ ,ಶಾಸಕ ನೆಹರು ಓಲೇಕಾರ ಸ್ವಾಗತಿಸಿದರು,ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಆಶಯ ಮಾತುಗಳನ್ನಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು