ಇತ್ತೀಚಿನ ಸುದ್ದಿ
ಮೀಸಲಾತಿ ವಿಚಾರದಲ್ಲಿ ಬಿಜೆಪಿ ಅವಕಾಶವಾದಿ ರಾಜಕಾರಣ: ಮಾಜಿ ಸಿಎಂ ಮೊಯ್ಲಿ ಆರೋಪ
02/01/2023, 13:38

ಮಂಗಳೂರು(reporterkarnataka.com): ಮೀಸಲಾತಿ ವಿಚಾರವನ್ನು ಸಚಿವ ಸಂಪುಟವು ತೀರ್ಮಾನಿಸುವಂತಿಲ್ಲ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಅಸಂಬದ್ಧ ನಿರ್ಧಾರ ಕೈಗೊಂಡಿದೆ. ಒಂದು ವರ್ಗವನ್ನು ತೆಗೆದುಹಾಕಿ, ಇನ್ನೊಂದು ವರ್ಗವನ್ನು ಮೀಸಲಾತಿ ಪಟ್ಟಿಗೆ ಸೇರಿಸುವುದು ಸರಿಯಲ್ಲ. ಇದರಿಂದ ಸಮಾಜ ಕವಲು ದಾರಿಯಲ್ಲಿ ಸಾಗುಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ
ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡುವಲ್ಲಿ ರಾಜ್ಯ ಸರ್ಕಾರ ` ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು
ಆರೋಪಿಸಿದರು.
ಮೀಸಲಾತಿ ಬಗ್ಗೆ ಸರ್ಕಾರ ತೆಗೆದುಕೊಂಡು ನಿರ್ಧಾರವು ಎಲ್ಲಾ ಸಮುದಾಯಗಳಿಗೆ ಅನ್ಯಾಯ ಉಂಟು ಮಾಡುತ್ತದೆ. ಒಬ್ಬ ಮುಖ್ಯಮಂತ್ರಿಯಾಗಿ ನಾನು ಮೀಸಲಾತಿಯನ್ನು ಹೇಗೆ ನೀಡಬೇಕು ಎಂಬುದರ ಕುರಿತು ಸ್ಪಷ್ಟ ನೀತಿಯನ್ನು ಆಗಲೇ ರೂಪಿಸಿದ್ದೆ. ಸುಪ್ರೀಂ ಕೋರ್ಟ್ ಕೂಡ ಇದೇ ವ್ಯವಸ್ಥೆಗೆ ಒಲವು ತೋರಿದೆ. ಯಾವುದೇ ಮೀಸಲಾತಿಯನ್ನು ರಾಜ್ಯ ಮತ್ತು ಕೇಂದ್ರದಲ್ಲಿ ಶಾಶ್ವತ ಆಯೋಗವು ಐದು ವರ್ಷಗಳಿಗೊಮ್ಮೆ ಪರಿಶೀಲಿಸಬೇಕು. ಸಾಮಾಜಿಕ-ಆರ್ಥಿಕ ಸಮೀಕ್ಷೆಯ ವರದಿಯ ಆಧಾರದ ಮೇಲೆ ಸಮುದಾಯಕ್ಕೆ ಅನುಗುಣವಾಗಿ ಮೀಸಲಾತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ನುಡಿದರು.
ಕೆಎಂಎಫ್ ಮತ್ತು ಅಮುಲ್ ನಡುವೆ ಸಹಕಾರಕ್ಕೆ ಕರೆ ನೀಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ, ಸಹಕಾರಿ ತತ್ವಗಳು ಅಧಿಕಾರದ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ . ಶಾ ಅವರ ಹೇಳಿಕೆ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ವಿರುದ್ಧವಾಗಿದೆ. ಅಮುಲ್ ಮೂಲಕ ದೇಶದಲ್ಲಿ ಶ್ವೇತ ಕ್ರಾಂತಿಯನ್ನು ನಡೆಸಿದ ವರ್ಗೀಸ್ ಕುರಿಯನ್ ಅವರು ಎಲ್ಲಾ ರಾಜ್ಯಗಳಲ್ಲಿ ಎಲ್ಲಾ ಹಾಲು ಒಕ್ಕೂಟಗಳು ಬಲಿಷ್ಠವಾಗಬೇಕೆಂದು ಬಯಸಿದ್ದರು ಎಂದು ತಿಳಿಸಿದರು.
ಬಿಜೆಪಿಯ ತಂತ್ರಗಳಿಗೆ ಕಾಂಗ್ರೆಸ್ ಬಲಿಯಾಗಬಾರದು ಮತ್ತು ಹೇಳಿಕೆಗಳನ್ನು ನೀಡುವಾಗ ಪ್ರತಿಕ್ರಿಯೆ ಮಾದರಿಯ ಕ್ರಮಕ್ಕೆ ಹೋಗಬಾರದು ಎಂದು ಮೊಯ್ಲಿ ಹೇಳಿದರು. ಪ್ರತಿಕ್ರಿಯೆಗಾಗಿ ಕ್ರಿಯೆಯ ಮೂಲಕ ಕಾಂಗ್ರೆಸ್ ತನ್ನ ಮತಗಳನ್ನು ಕಳೆದುಕೊಳ್ಳುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನಾಗಲಿ, ತಮ್ಮ ಪುತ್ರನಾಗಲಿ ಸ್ಪರ್ಧಿಸುವುದಿಲ್ಲ ಎಂದರು.