ಇತ್ತೀಚಿನ ಸುದ್ದಿ
ಜೈಲಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಿದರೆ ಕಠಿಣ ಕ್ರಮ: ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಹಠಾತ್ ಭೇಟಿ ನೀಡಿದ ಗೃಹ ಸಚಿವರ ಎಚ್ಚರಿಕೆ
29/12/2022, 16:43

ಬೆಳಗಾವಿ(reporterkarnataka.com): ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡುವ ಜೈಲು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಕೇಂದ್ರ ಕಾರಾಗೃಹವಾದ ಹಿಂಡಲಗಾ ಜೈಲಿಗೆ ಹಠಾತ್ ಭೇಟಿ ನೀಡಿದ ಗೃಹ ಸಚಿವರು ನಂತರ ಜೈಲಿನ ಹಿರಿಯ ಅಧಿಕಾರಿಗಳ ಜತೆ
ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಗಳು ಹಾಗೂ ಮಾದಕ ವಸ್ತುಗಳನ್ನು ಸರಬರಾಜು ತಪ್ಪಿಸಲು, ಅತ್ಯಾಧುನಿಕ ತಪಾಸಣಾ ಯಂತ್ರ ಅಳವಡಿಸಲಾಗಿದೆ. ಆದರೂ, ಕೆಲವು ಬಾರಿ ಸಿಬ್ಬಂದಿ ಕಣ್ಣು ತಪ್ಪಿಸಿ, ನಿಷೇಧಿತ ಪದಾರ್ಥಗಳು ಜೈಲಿನೊಳಗೆ ಜಪ್ತಿ ಮಾಡಿರುವುದು ನಡೆದಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ತಪ್ಪಿತಸ್ಥರ ವಿರುದ್ಧ, ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಜೈಲಿನ ಒಳಗಿರುವ, ಟೈಲರಿಂಗ್ ಘಟಕ ಹಾಗೂ ಮರಗೆಲಸ ಘಟಕಗಳಿಗೆ ಭೇಟಿ ನೀಡಿ, ಆಧುನಿಕ ಉಪಕರಣ ಗಳನ್ನು ಒದಗಿಸಲು, ಕ್ರಮ ಕೈಗೊಳ್ಳಲಾಗುವುದು ಎಂದರು.
ಅತಿ ಭದ್ರತಾ ಸೆಲ್ ಗಳು, ಆಸ್ಪತ್ರೆ ಹಾಗೂ ಕೈದಿಗಳೇ
ನಿರ್ವಹಿಸುತ್ತಿರುವ ಎಫ್ ಎಂ ಸ್ಟೇಷನ್, ಅಡುಗೆ ಮನೆ ಹಾಗೂ ಇನ್ನಿತರ ವ್ಯವಸ್ಥೆಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.