ಇತ್ತೀಚಿನ ಸುದ್ದಿ
ಕಾಟಿಪಳ್ಳ ಅಂಗಡಿ ಮಾಲೀಕನ ಕೊಲೆ ಪ್ರಕರಣ: 3 ಮಂದಿ ಆರೋಪಿಗಳ ಬಂಧನ
26/12/2022, 17:31

ಸುರತ್ಕಲ್(reporter Karnataka.com): ಕಾಟಿಪಳ್ಳದ ಅಂಗಡಿ ಮಾಲೀಕ ಜಲೀಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಬಂಧಿತ ಆರೋಪಿಗಳನ್ನು ಶೈಲೇಶ್ ಪೂಜಾರಿ ಅಲಿಯಾಸ್ ಶೈಲು (21), ಸುವಿನ್ ಕಾಂಚನ್ (25) ಮತ್ತು ಪಚ್ಚು ಅಲಿಯಾಸ್ ಪವನ್ (26) ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಶೈಲೇಶ್ ಮತ್ತು ಸುವಿನ್ ಕಾಂಚನ್ ಎಂಬವರು ಪಿಂಕಿ ನವಾಜ್ ಎಂಬಾತನ ಕೊಲೆ ಯತ್ನ ಪ್ರಕರಣದ ಆರೋಪಿಗಳು ಆಗಿದ್ದಾರೆ. 2018ರಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಪಿಂಕಿ ನವಾಜ್‌ನನ್ನು ಕೊಲೆ ಮಾಡಲು 2021ರ ಫೆ.10ರಂದು ಯತ್ನ ಮಾಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶೈಲೇಶ್ ಪೂಜಾರಿ ಹಲವು ವರ್ಷಗಳ ಹಿಂದೆ ನಡೆದ ರವೂಫ್ ಕೊಲೆ ಪ್ರಕರಣದ ಆರೋಪಿಯ ಪುತ್ರನಾಗಿದ್ದಾನೆ. ಸುಮಾರು ವರ್ಷಗಳ ಹಿಂದೆ ಕಾಟಿಪಳ್ಳದಲ್ಲಿ ನಡೆದಿದ್ದ ರವೂಫ್ ಹತ್ಯೆ ಪ್ರಕರಣದಲ್ಲಿ ಈಗಿನ ಆರೋಪಿ ಶೈಲೇಶ್ ಅವರ ತಂದೆ ಕೇಶವ ಪೂಜಾರಿ ಪ್ರಮುಖ ಆರೋಪಿಯಾಗಿದ್ದರು. ಸುರತ್ಕಲ್ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.