ಇತ್ತೀಚಿನ ಸುದ್ದಿ
ವಾಮಂಜೂರು: ‘ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ’ಗೆ ಸಂಸದ ನಳಿನ್ ಚಾಲನೆ
22/12/2022, 20:29

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಸ್ವಚ್ಭ ಭಾರತ ಮಿಷನ್ (ಗ್ರಾಮೀಣ) ವತಿಯಿಂದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಪ್ರಯುಕ್ತ 5 ದಿನಗಳು ನಡೆಯಲಿರುವ ‘ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ’ ಎಂಬ ಬೃಹತ್ ಸ್ವಚ್ಛತಾ ಆಂದೋಲನಕ್ಕೆ ವಾಮಂಜೂರು ಜಂಕ್ಷನ್‌ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ ಜನರಲ್ಲಿ ಸ್ವಚ್ಛತೆಯ ಬಗ್ಗೆ ಸಾಕಷ್ಟು ಜಾಗೃತಿ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸ್ವಚ್ಛತೆಗಾಗಿ ಪ್ರಶಸ್ತಿಯನ್ನು ಪಡೆದಿದೆ. ದೇಶದ ಪ್ರಧಾನ ಮಂತ್ರಿಗಳು ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ ಆರ್ಥಿಕ ಶುಚಿತ್ವ, ಪರಿಸರ ಸ್ವಚ್ಛತೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಇದರೊಂದಿಗೆ ದೇಶದ ಜನರು ಈ ಕಲ್ಪನೆಯನ್ನು ದೇಶಾದ್ಯಂತ ವಿಸ್ತರಿಸಿದರು ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ರಾಮಕೃಷ್ಣ ಮಠದ ಸ್ವಾಮಿಜಿಗಳಾದ ಶ್ರೀ ಜಿತಕಾಮಾನಂದಜಿ ಅವರು ಮಾತನಾಡಿ, ನಮ್ಮ ಪರಿಸರ ಸಂರಕ್ಷಣೆಗಾಗಿ ಸ್ವಚ್ಛತೆಗಾಗಿ ಗಮನಹರಿಸಬೇಕಾಗಿದೆ. ಅದು ಪ್ರತಿ ಮನೆಯಿಂದ ಆರಂಭವಾಗಬೇಕು. ಸ್ವಚ್ಛತೆ ಈ ಭೂಮಿಗೆ ಸಲ್ಲಿಸುವ ಪೂಜೆ, ಕಸವನ್ನು ಹೆಕ್ಕುವ ಮೂಲ ಗೌರವ ಸಲ್ಲಿಸಬೇಕು ಎಂದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಭ ಭಾರತ ಮಿಷನ್ (ಗ್ರ‍್ರಾಮೀಣ)ವತಿಯಿಂದ ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಕಾರ್ಯಕ್ರಮವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಅಂತ ರಾಷ್ಟ್ರೀಯ ಜಾಂಬೂರಿ ಮೇಳದ ಪ್ರಯುಕ್ತ 5ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. 150 ಕಿ.ಮೀ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಸುಮಾರು 50 ಸಾವಿರ ವಿದ್ಯಾರ್ಥಿಗಳು, ಸ್ಕೌಟ್ಸ್ ಗೈಡ್ಸ್ ನ ಅಧಿಕಾರಿಗಳು ಹಾಗೂ ಇತರ ಸ್ಥಳೀಯ ಸಂಘ ಸಂಸ್ಥೆ ಗಳ ಪ್ರತಿನಿಧಿಗಳು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಪ್ರತಿನಿಧಿಗಳು ಸೇರಿದಂತೆ 8ತಂಡಗಳು ಕಾರ್ಯಾಚರಣೆ ನಡೆಸಲಿದ್ದಾರೆ. ಸ್ವಚ್ಛತೆಯ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಶಾಸಕರಾದ ಉಮಾನಾಥ ಕೊಟ್ಯಾನ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಭಾಸ್ಕರ ಮೊಯ್ಲಿ, ಹೇಮಲತಾ ರಘು ಸಾಲ್ಯಾನ್, ಸಂಗೀತ ನಾಯಕ್, ಮಾಜಿ ಶಾಸಕ ಕ್ಯಾ.ಗಣೇಶ್ ಕಾರ್ಣಿಕ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ಥಳೀಯ ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು.