ಇತ್ತೀಚಿನ ಸುದ್ದಿ
ಕಂಬಳ ಕ್ರೀಡೆಯಲ್ಲೂ ದೈವಿಕ ಶಕ್ತಿಯ ಅನಾವರಣ: ಕೊಡಮಣಿತ್ತಾಯ ನೇಮೋತ್ಸವ
21/11/2022, 19:07

ಕಾರ್ಕಳ(reporterkarnataka.com):
ತುಳುನಾಡಿನ ಸಂಸ್ಕೃತಿ ಪರಂಪರೆ ನಂಬಿಕೆಯಲ್ಲಿ ದೈವಗಳಿಗೆ ವಿಶಿಷ್ಠವಾದ ಸ್ಥಾನವಿದೆ. ಈ ದೈವಗಳಿಗೆ ನಂಬಿದವರಿಗೆ ಇಂಬು ನೀಡಿ ಕಾಪಾಡುವ ಕಾರಣಿಕ ಶಕ್ತಿ ಇದೆ. ದೈವಗಳಿಗೆ ಈ ನೆಲದ ಕೃಷಿಗೂ ಅವಿನಾಭಾವ ಸಂಬಂಧವಿದೆ , ಜನಪದ ಕಂಬಳ ಕ್ರೀಡೆಯಲ್ಲೂ ದೈವಿಕ ಶಕ್ತಿಯ ಅನಾವರಣ ವಾಗುತ್ತಿದೆ. ಇಂತಹ ಅಪೂರ್ವ ದೈವಸಾನಿದ್ಯದ ಕ್ಷೇತ್ರ ಅಂಡಾರಿನ ಕೊಡಮಣಿತ್ತಾಯ ಕ್ಷೇತ್ರ ವು ಒಂದು.
ತುಳುವಿನಲ್ಲಿ ಜಾರ್ದೆ ಕೊಡಿ ತಿಂಗಳ (ನವೆಂಬರ್) ನಲ್ಲಿ ಕಂಬಳ ಕೊಡಮಣಿತ್ತಾಯ ನೇಮೋತ್ಸವ ನಡೆಯುತ್ತದೆ. ಈ ನೇಮೋತ್ಸವ ಸಂದರ್ಭದಲ್ಲಿ ದೈವಗಳಿಗೆ ಬಿಟ್ಟ ಕಂಬಳ ಗದ್ದೆಗಳಿವೆ. ಮೊದಲು ದೈವದ ಹೆಸರಿನಲ್ಲಿ ಕಂಬಳದ ಜಾತ್ರೆ ನಡೆಯುತಿತ್ತು. ಆದರೆ ಈಗ ಕಂಬಳ ಪರಂಪರೆಯು ಸಾಂಕೇತಿಕವಾಗಿ ನಡೆಯುತ್ತಿದೆ.
ದೈವಸ್ಥಾನದಿಂದ ಕಂಬಳ ದ ಗದ್ದೆಯ ಮಂಜೊಟ್ಟಿ ವರೆಗೆ ಕೊಡಮಣಿತ್ತಾಯ ದೈವ ಹಾಗೂ ಗಣಗಳಾದ ಎರುಬಂಟ ,ಜೋಗಿ- ಪುರುಷ ಕಂಬಳ ಗದ್ದೆಯವರೆಗೆ ಕೊಂಬು ಕಹಳೆ , ದೋಲು ತಾಸೆ ವಾದ್ಯ ಘೋಷಗಳೊಂದಿಗೆ ಸಾಗಿ ಬರುವಾಗ ಭಕ್ತಾದಿಗಳು ಕಣ್ತುಂಬಿ ಕೊಳ್ಳುತ್ತಾರೆ.
ಕಂಬಳ ಗದ್ದೆಯ ಮಂಜೊಟ್ಟಿ ಯಲ್ಲಿ ದೈವ ಕೊಡಮಣಿತ್ತಾಯ ಅಭಯ ನೀಡುತಿದ್ದರೆ , ಗಣಗಳಾದ
ಎರುಬಂಟ ,ಜೋಗಿ- ಪುರುಷ ಕೊಡಮಣಿತ್ತಾಯ ದೈವದ ಹಾಗೂ ಬ್ರಹ್ಮಬೈದರ್ಕಳ ಕಂಬಳ ಗದ್ದೆಗೆ ಸುತ್ತು ಹಾಕುತ್ತವೆ. ಇದೆ ಸಂದರ್ಭದಲ್ಲಿ ಕಂಬಳ ಕೋಣವನ್ನು ಗದ್ದೆಗೆ ಇಳಿಸಿ ಓಡಿಸುತ್ತಾರೆ. ಅದೆ ಹೊತ್ತಿಗೆ ಕೆಸರಿನಲ್ಲೆ ರಥದಲ್ಲಿ ಪೂಕರೆಯನ್ನು ಇಟ್ಟು ಸಾಗುವ ಪರಿ ಅನನ್ಯವಾದುದು. ಎರಡು ಗದ್ದೆಗಳಲ್ಲಿ ಪೂಕರೆಯನ್ನಿಟ್ಟು ಭಕ್ತಿ ಭಾವದಿಂದ ಪರಂಪರೆಯ ವಿಧಿ ವಿಧಾನಗಳ ಮೂಲಕ ನೆಡುತ್ತಾರೆ.
ಗೋಧೋಳಿ ಸಮಯದಲ್ಲಿ ಈ ಎಲ್ಲಾ ವಿಧಿ ವಿಧಾನಗಳು ನಡೆಯುವುದರಿಂದ ಸಂಜೆಯ ರಂಗಿನೊಂದಿಗೆ ವಿಶಿಷ್ಠವಾದ ವಾತಾವರಣ ಸೃಷ್ಟಿಸುತ್ತದೆ.
ಕಂಬಳ ಗದ್ದೆಯಲ್ಲಿ ನುಡಿಗಟ್ಟು ಗಳು ನಡೆದ ನಂತರ ನಾಲ್ಕು ಗುತ್ತಿನ ಮನೆಯವರು ಹಾಗೂ ಊರ ಪರವೂರ ಭಕ್ತರೊಂದಿಗೆ ಕೊಡಮಣಿತ್ತಾಯ ದೈವವು ದೈವಸ್ತಾನದತ್ತ ಸಾಗಿ ಮತ್ತೆ ನುಡಿಕಟ್ಟುಗಳೊಂದಿಗೆ ನೇಮೋತ್ಸವ ದ ವಿಧಿವಿಧಾನಗಳು ಕೊನೆಗೊಳ್ಳುತ್ತವೆ.