ಇತ್ತೀಚಿನ ಸುದ್ದಿ
ಪೋಷಕರ ಸಭೆಯಲ್ಲಿ ಶಿಕ್ಷಕಿಯ ಮೇಲೆ ಹಲ್ಲೆ; ಆರೋಪಿ ಬಂಧನ; ಗಾಯಾಳು ಆಸ್ಪತ್ರೆಗೆ ದಾಖಲು
06/11/2022, 18:05

ಮಂಗಳೂರು(reporterkarnataka.com): ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಕರ- ಪೋಷಕರ ಸಭೆಯಲ್ಲಿ ವ್ಯಕ್ತಿಯೊಬ್ಬ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದು,ಆರೋಪಿಯನ್ನು ಬಂಧಿಸಿದ ಘಟನೆ ಕಾಟಿಪಳ್ಳದಲ್ಲಿ ನಡೆದಿದೆ.
ಕಾಟಿಪಳ್ಳ ಎರಡನೇ ಬ್ಲಾಕ್‌ನ ಶಂಶುದ್ದೀನ್ ಸರ್ಕಲ್ ಬಳಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಪೋಷಕರ ಸಭೆಯ ವೇಳೆ ಮಹಮ್ಮದ್ ಹನೀಫ್ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾರಾಯಣ ಗುರು ಶಾಲೆಯ ಬಳಿಯ ನಿವಾಸಿ ಚಂದ್ರಕಲಾ ಎಂಬಾಕೆ ಮಹಮ್ಮದ್ ಹನೀಫ್ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಚಂದ್ರಕಲಾ ಅವರಿಗೆ ಆರೋಪಿ ಹನೀಫ್ ಪರಿಚಯವಿದ್ದು, ಪರಿಚಯದ ನೆಲೆಯಲ್ಲಿ ಹನೀಫ್ ಪತ್ನಿಗೆ ಚಂದ್ರಕಲಾ ಅವರು ಸಾಲ ನೀಡಿದ್ದರು. ಆ ಮಹಿಳೆ ಸಾಲವನ್ನು ಹಿಂತಿರುಗಿಸಿರಲಿಲ್ಲ. ಸಾಲವನ್ನು ಹಿಂತಿರುಗಿಸುವಂತೆ ಚಂದ್ರಕಲಾ ಕೇಳಿದ್ದರು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಹನೀಫ್ ಎರಡು ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ. ಶಾಲೆಯಲ್ಲಿ ಪೋಷಕರ ಸಭೆಯ ಸಂದರ್ಭದಲ್ಲಿ ಚಂದ್ರಕಲಾ ಮತ್ತು ಹನೀಫ್ ಪತ್ನಿಯ ಮಧ್ಯೆ ಜಗಳ ನಡೆದಿದೆ.
ಈ ವೇಳೆ ಕೋಪಗೊಂಡ ಹನೀಫ್ ಏಕಾಏಕಿ ಹಲ್ಲೆ ನಡೆಸಿದ್ದು, ಶಿಕ್ಷಕಿಯ ಬಲಗೈಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.