ಇತ್ತೀಚಿನ ಸುದ್ದಿ
ಕಡಲ ತೀರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ: ಮಲ್ಪೆಯಲ್ಲಿ ಸಾರ್ವಜನಿಕರ ಹಕ್ಕೊತ್ತಾಯ
23/10/2022, 14:07
ಮಲ್ಪೆ(reporterkarnataka.com):ಮಲ್ಪೆ ಕಡಲ ತೀರದ ಪಡುಕೆರೆಯಿಂದ ಮಟ್ಟುವರೆಗೆ ಸ್ಥಳೀಯ ಮೀನುಗಾರ ನಿವಾಸಿಗಳು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ನಿರ್ಭಂದ ಹೇರಿ 8 ಕಡೆಗಳಲ್ಲಿ ಬ್ಯಾನರ್ ಅಳವಡಿಸಿದ್ದಾರೆ. ಈ ವಿಚಾರದ ಕುರಿತಾಗಿ ಮಲ್ಪೆ ಪೋಲಿಸರು ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸ್ಥಳೀಯ ಮೀನುಗಾರ ಮಹಿಳೆ ಜಯಲಕ್ಷ್ಮೀ ಕೋಟ್ಯಾನ್ ಅವರು, ಈ ಭಾಗದಲ್ಲಿ ರಾತ್ರಿ 1 ಗಂಟೆಯವರೆಗೂ ಪ್ರವಾಸಿಗರು ತಿರುಗುತ್ತಾರೆ. ಪ್ರವಾಸಿಗರು ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಓಡಾಡುತ್ತಿದ್ದು, ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಹಿಳೆಯರು, ಮಕ್ಕಳಿಗೆ ಭೀತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಜಾನೆ ಕೆಲಸಕ್ಕೆ ಹೋಗುವಾಗಲೂ ಸೇತುವೆ ಬಳಿ ಅಪರಿಚಿತರು ನಿಂತುಕೊಂಡಿರುತ್ತಾರೆ. ರಾತ್ರಿ ಭಜನಾ ಮಂದಿರ ಗೇಟ್ ತೆಗೆದು ಒಳಗೆ ಪ್ರವೇಶಿಸುತ್ತಾರೆ, ನಮ್ಮದೇ ಊರಿನಲ್ಲಿ ನಮಗೆ ಓಡಾಡಲು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಲ್ಪೆ ಠಾಣೆಯ ಪಿಎಸ್.ಐ ಶಕ್ತಿವೇಲು ಮಾತನಾಡಿ ಗ್ರಾಮಸ್ಥರ ಸಮಸ್ಯೆ ಆಲಿಸಲು ಬಂದಿದ್ದೇವೆ, ನಿಮ್ಮಿಂದ ಸಹಕಾರ ಅಗತ್ಯವಾಗಿದೆ. ರಾತ್ರಿ ಹೊಯ್ಸಳ ಗಸ್ತು ತಿರುಗುತ್ತದೆ. ಯಾವುದೇ ಅಕ್ರಮ ಹಾಗೂ ಅನಗತ್ಯವಾಗಿ ಓಡಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದರು.
ಸಭೆಯಲ್ಲಿ ಸ್ಥಳೀಯ ಮುಖಂಡರಾದ ರಾಮ ಕಾಂಚನ್, ರಮೇಶ್ ಮೆಂಡನ್, ಪ್ರಕಾಶ್ ಮಲ್ಪೆ ಹಾಗು ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.