ಇತ್ತೀಚಿನ ಸುದ್ದಿ
ಸಮುದ್ರದಲ್ಲಿರುವ ಜೀವವೈವಿಧ್ಯಗಳ ರಕ್ಷಣೆ: ಬೆಂಗಳೂರಿನ ಗೆಳತಿಯರಿಂದ ಕರಾವಳಿಯಲ್ಲಿ ಬೈಕ್ ರೈಡ್!
12/10/2022, 23:29
ಉಡುಪಿ(reporter Karnataka.com): ಶಾಂತಿಗಾಗಿ, ಸೌಹಾರ್ದತೆಗಾಗಿ, ಪರಿಸರಕ್ಕಾಗಿ ಆಗಾಗ ಬೈಕ್ ಯಾತ್ರೆ ನಡೆಸುವುದನ್ನು ನಾವು ಕೇಳಿದ್ದೇವೆ. ಆದರೆ ಬೆಂಗಳೂರಿನ ಇಬ್ಬರು ಮಹಿಳೆಯರು ಸಮುದ್ರದಲ್ಲಿರುವ ಜೀವವೈವಿಧ್ಯಗಳ ರಕ್ಷಣೆಗಾಗಿ ಕರಾವಳಿಯಲ್ಲಿ ಬೈಕ್ ಸಂಚಾರ ಆರಂಭಿಸಿದ್ದಾರೆ.
ಸ್ವಾತಿ ಮತ್ತು ಅನಿತಾ ಅವರು ಈ ಅಪರೂಪದ ಗೆಳತಿಯರು. ಅನಿತಾ ಅವರು ತನ್ನ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಸಮುದ್ರದಲ್ಲಿರುವ ಜೀವವೈವಿಧ್ಯಗಳ ರಕ್ಷಣೆಗೆ ಮುಂದಾಗಿದ್ದಾರೆ. ಅನಿತಾ ಎಂಬ ಗೃಹಿಣಿ, ಪರಿಸರ ಜಾಗೃತಿಗಾಗಿ ಗೆಳತಿಯೊಂದಿಗೆ ಕೈಜೋಡಿಸಿದ್ದಾರೆ. ಈ ಗೆಳತಿಯರು ಈಗಾಗಲೇ ಫೆಬ್ರವರಿಯಲ್ಲಿ “ಮಹಿಳೆಯರ ಭಯಮುಕ್ತ ಕರ್ನಾಟಕ” ಎಂಬ ಅಭಿಯಾನವನ್ನು ನಡೆಸಿ, ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಸಂಚರಿಸಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇದೀಗ ಬೆಂಗಳೂರಿನಿಂದ 1300 ಕಿ.ಮೀ. ಬೈಕಿನಲ್ಲಿ ಬಂದು, ಆ.9ರಿಂದ ಮಂಗಳೂರಿನಿಂದ ಆರಂಭಿಸಿ ಕರಾವಳಿಯ 3 ಜಿಲ್ಲೆಗಳಲ್ಲಿ ಬೈಕ್ ಮೇಲೆ ಸಂಚರಿಸುತಿದ್ದಾರೆ. ಸಮುದ್ರ ಜೀವವೈವಿಧ್ಯಗಳ ಬಗ್ಗೆ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ತಾವೇ ಬೀಚುಗಳಲ್ಲಿ ಕಸ ಹೆಚ್ಚಿ, ಸ್ವಚ್ಛತೆ ನಡೆಸಿ ಮಾದರಿಯಾಗುತ್ತಿದ್ದಾರೆ.
ಮಂಗಳವಾರ ಇಲ್ಲಿನ ಹೂಡೆ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಅವರೊಂದಿಗೆ ಸ್ಥಳೀಯರು, ಸಂಘಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದು, ಅವರು ಅಭಿಯಾನ ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುವಂತಿತ್ತು.
ಈಗಾಗಲೇ ಮಂಗಳೂರಿನ ಸೋಮೇಶ್ವರ, ಬೆಂಗ್ರೆ, ಪಣಂಬೂರು ಬೀಚುಗಳಲ್ಲಿ ಸಂಚರಿಸಿ ಅಲ್ಲಿನ ಜನರೊಂದಿಗೆ ವಿಚಾರವಿನಿಮಯ ನಡೆಸಿ ಸಮುದ್ರ ಜೀವಿಗಳ ರಕ್ಷಣೆಗೆ ಪರಿಸರವನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಒಟ್ಟು 29 ಬೀಚುಗಳನ್ನು ಅಲ್ಲಿನ ಜನರನ್ನು ಸಂದರ್ಶಿಸುವ ಗುರಿ ಈ ಸ್ವಾತಿ – ಅನಿತಾ ಜೋಡಿಯದ್ದು.
ಜೀವವೈವಿಧ್ಯ ರಕ್ಷಣೆ ಹವ್ಯಾಸವಾಗಬೇಕು
ಸಮುದ್ರ ಜೀವಿಗಳ ರಕ್ಷಣೆಗೆ ಮುಖ್ಯವಾಗಿ ಪ್ಲಾಸ್ಟಿಕ್ ಸಮುದ್ರ ಸೇರದಂತೆ ಸ್ಥಳೀಯರಿಗೆ ಮತ್ತು ಬೀಚುಗಳಲ್ಲಿ ಸಿಗುವ ಪ್ರವಾಸಿಗರಿಗೆ ಮಾಹಿತಿ ನೀಡುತಿದ್ದೇವೆ. ಸ್ಥಳಿಯ ಕಾಲೇಜು ವಿದ್ಯಾರ್ಥಿಗಳ ಮತ್ತು ಪರಿಸರಾಸಕ್ತ ಮನಸ್ಸುಗಳನ್ನು ಒಂದೆಡೆ ಸೇರಿಸಿ ಬೀಚುಗಳನ್ನು ಕಸಮುಕ್ತ ಮಾಡುವ ಪ್ರಯತ್ನ ಮಾಡುತಿದ್ದೇವೆ. ಮುಂದೆ ಇದು ಎಲ್ಲರ ಹವ್ಯಾಸವಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ.
— ಸ್ವಾತಿ – ಅನಿತಾ ಬೆಂಗಳೂರು .