ಇತ್ತೀಚಿನ ಸುದ್ದಿ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ: ಹಳೆ ಬಂದರು, ಬೀಚ್ ಪಾರ್ಕ್, ಪಾರಂಪರಿಕ ಕಟ್ಟಡ ಕೇಳುವವರಿಲ್ಲ: ರಸ್ತೆ ನುಂಗಿತು ಕಾಂಚಾಣವೆಲ್ಲ!!
29/06/2021, 07:48
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನ ಪಡೆದಿದೆ. ಮಂಗಳೂರು ಎಷ್ಟನೇ ಶ್ರೇಯಾಂಕ ಪಡೆದಿದೆ ಎಂದು ಕೇಳಿದರೆ ಇಲ್ಲಿನ ಜನಪ್ರತಿನಿಧಿಗಳಿಗೆ ಬಿಡಿ, ಸ್ವತಃ ಸ್ಮಾರ್ಟ್ ಸಿಟಿ ಎಂಡಿಗೆ ಗೊತ್ತಿರಲಿಕ್ಕಿಲ್ಲ. ಮಂಗಳೂರನ್ನು ಒಂದು ಪರ್ಫೆಕ್ಟ್ ಸಿಟಿ ಮಾಡಲು ಸಾಧ್ಯವಾಗದವರಿಗೆ ಸ್ಮಾರ್ಟ್ ಸಿಟಿ ಯೋಜನೆ ಕೊಟ್ಟರೆ ಮತ್ತೇನು ಮಾಡ್ಯಾರು? ಎನ್ನುವಂತಾಗಿದೆ ಯೋಜನೆಯ ಸ್ಥಿತಿ.
ಕೊರೊನಾ ಲಾಕ್ ಡೌನ್ ಮುಗಿದ ಬಳಿಕ ನಗರದ ಹಂಪನಕಟ್ಟೆ ಸುತ್ತಮುತ್ತಲಿನ ಯಾವುದೇ ರಸ್ತೆಗೆ ಕಾಲಿಡದ ಪರಿಸ್ಥಿತಿ ಬಂದೊದಗಿದೆ. ಎಲ್ಲಿ ನೋಡಿದರೂ ರಸ್ತೆ ಕೆಲಸ. ಗಟ್ಟಿಮುಟ್ಟಾಗಿರುವ ರಸ್ತೆಯನ್ನು ಅಗೆದು, ಫುಟ್ ಪಾತ್ ಗಳನ್ನು ಕಿತ್ತೆಸೆದು ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕೆಲ್ಲ ಹಣ ಸ್ಮಾರ್ಟ್ ಸಿಟಿಯದ್ದಾಗಿದೆ. ತೆರಿಗೆದಾರರ ಹಣವನ್ನು ಹೇಗೆ ಪೋಲು ಮಾಡಿ ಹಂಚಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ರಸ್ತೆ ಮರು ನಿರ್ಮಾಣ, ಚರಂಡಿ ನಿರ್ಮಾಣ, ಕ್ಲಾಕ್ ಟವರ್, ಸ್ಮಾರ್ಟ್ ಬಸ್ ಶೆಲ್ಟರ್ ಸಾಕ್ಷಿಯಾಗಿದೆ. ಪಚ್ಚನಾಡಿ ಸಮೀಪ ಅಕ್ಕಪಕ್ಕದಲ್ಲಿ ಎರಡು ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಬಸ್ ಶೆಲ್ಟರ್ ನ ಎದುರುಗಡೆ ಹಾಗೂ ಸುತ್ತಮುತ್ತಲು ಹುಲ್ಲು ಸಖತ್ ಬೆಳೆದು ನಿಂತಿದೆ.
ಮಂಗಳೂರಿನ ಆರ್ಥಿಕ ಬೆನ್ನೆಲುಬಾಗಿರುವ ಹಳೆ ಬಂದರು ಅಭಿವೃದ್ಧಿಯ ಅಂಶವನ್ನು ಇಟ್ಟುಕೊಂಡು ಕೇಂದ್ರದಿಂದ ಪಡೆದ ಸ್ಮಾರ್ಟ್ ಸಿಟಿ ಯೋಜನೆ ಇಂದು ಅರ್ಥವನ್ನೇ ಕಳೆದುಕೊಂಡಿದೆ. ಹಳೆ ಬಂದರು ಇದ್ದ ಹಾಗೆ ಇದೆ. ಹಳೆ ಬಂದರು ಪ್ರದೇಶದ 10 ಎಕರೆ ಜಾಗವನ್ನು ಅಭಿವೃದ್ಧಿಪಡಿಸುವ ಕಾರ್ಯ ಇನ್ನೂ ನಡೆದಿಲ್ಲ.ಮುಗ್ಧ ಮೀನುಗಾರರು ಇದನ್ನೆಲ್ಲ ಪ್ರಶ್ನಿಸಲಾರರು ಎನ್ನುವುದು ಇಲ್ಲಿನ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ. ಇಲ್ಲಿನ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶುದ್ಧ ಹಸ್ತರು. ಇವತ್ತಿಗೂ ಅವರ ಮನೆಯಲ್ಲಿ ಸ್ಮಾರ್ಟ್ ಟಿವಿ ಇಲ್ಲ. ಗೂಡಂಗಡಿಯಲ್ಲಿ ಚಾಹ ಕುಡಿಯುವಷ್ಟು ಸರಳ ವ್ಯಕ್ತಿ. ಭ್ರಷ್ಟಾಚಾರಕ್ಕೆ ಕಡು ವಿರೋಧಿಯಾದ ಇವರನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡುತ್ತಿದ್ದರೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಈ ದುರ್ಗತಿ ಬರುತ್ತಿರಲಿಲ್ಲ ಎಂದು ಮಂಗಳೂರಿನ ಜನತೆ ಆಡಿಕೊಳ್ಳುತ್ತಿದ್ದಾರೆ. ಉಸ್ತುವಾರಿ ಸಚಿವರಂತು ಯಾವುದಕ್ಕೂ ಮಾತನಾಡುವುದಿಲ್ಲ. ಇಲ್ಲಿನ ಸಂಸದರು ಹಾಗೂ ಮಂಗಳೂರು ಉತ್ತರ ಮತ್ತು ದಕ್ಷಿಣದ ಶಾಸಕರು ಹೇಳಿದನ್ನು ಮಾತ್ರ ಅನುಷ್ಠಾನಗೊಳಿಸುತ್ತಾರೆ ಎಂಬ ದೂರು ಕೂಡ ಆಗಾಗ ಕೇಳಿ ಬರುತ್ತಿದೆ.
ಇದೀಗ ಮಂಗಳೂರಿನಲ್ಲಿ ಬರೇ ರಸ್ತೆ, ಫುಟ್ ಪಾತ್, ಅಂಡರ್ ಪಾಸ್ ತರಹದ ಕೆಲಸ ಮಾತ್ರ ನಡೆಯುತ್ತಿದೆ. ಸ್ಮಾರ್ಟ್ ಸಿಟಿಯ ಮೂಲ ಮಂತ್ರವಾದ ಪ್ರದೇಶಾಭಿವೃದ್ಧಿ ಯೋಜನೆ ಯಾವುದೂ ಕಾರ್ಯಗತವಾಗುತ್ತಿಲ್ಲ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬೀಚ್ ಪಾರ್ಕ್ ಗಳು ಹೇಳ ಹೆಸರಿಲ್ಲದಂತಾಗಿದೆ. ಸರಕಾರದ ಒಳ್ಳೆಯ ಯೋಜನೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಹೇಗೆ ಹಾಳುಗೆಡಹುತ್ತಾರೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ.
(ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಆರಂಭದಿಂದಲೇ ಹೇಗೆ ದಿಕ್ಕು ತಪ್ಪಿದೆ? ಯೋಜನೆಯ ಹೆಸರಿನಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದಿದೆಯಾ? ಇನ್ನಷ್ಟು ವಿಶೇಷ ವರದಿಗಾಗಿ reporterkarnataka.com ಓದುತ್ತಾ ಇರಿ)