ಇತ್ತೀಚಿನ ಸುದ್ದಿ
ಮೈಸೂರು: ಇಂದಿನಿಂದ 90 ದಿನಗಳ ಕಾಲ ದಸರಾ ವಸ್ತು ಪ್ರದರ್ಶನ; ಪುನೀತ್ ರಾಜ್‌ಕುಮಾರ್ ಸ್ಯಾಂಡ್ ಮ್ಯೂಸಿಯಂ
26/09/2022, 10:50

ಮೈಸೂರು(reporterkarnataka.com):ಮೈಸೂರು ದಸರಾ ಅಂಗವಾಗಿ ದೊಡ್ಡ ಕೆರೆ ಮೈದಾನದಲ್ಲಿ ದಸರಾ ವಸ್ತುಪ್ರದರ್ಶನ ಸೆ.26ರಿಂದ 90 ದಿನಗಳವರೆಗೆ ನಡೆಯಲಿದೆ. ಈ ಬಾರಿ ಪ್ರವಾಸಿಗರನ್ನು ಆಕರ್ಷಿಸಲು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸ್ಯಾಂಡ್ ಮ್ಯೂಸಿಯಂ ನಿರ್ಮಿಸಲಾಗಿದೆ.
ಈ ಕುರಿತು ಮಾತನಾಡಿದ ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಅವರು, ಸೆ.26ರಂದು ಸಂಜೆ 4ಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಉದ್ಘಾಟಿಸಲಿದ್ದಾರೆ. ವಸ್ತುಪ್ರದರ್ಶನವನ್ನು ಯಶಸ್ವಿ ಗೊಳಿಸಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂದರ್ಶಕರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ’ ಎಂದರು.
‘ವಯಸ್ಕರಿಗೆ 30 ರೂ, ಮಕ್ಕಳಿಗೆ 20ರೂ ಹಾಗೂ ದ್ವಿಚಕ್ರ ವಾಹನಗಳ ನಿಲುಗಡೆಗೆ 10 ರೂ , ಕಾರ್‌ಗಳಿಗೆ 30 ರೂ , ಬಸ್‌ಗಳಿಗೆ 50 ರೂ ಶುಲ್ಕ ನಿಗದಿಪಡಿಸಲಾಗಿದೆ. ಫುಡ್ ಕೋರ್ಟ್, ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ದುಬಾರಿ ದರ ವಿಧಿಸದಂತೆ ಸೂಚಿಸಲಾಗಿದೆ. ದರಪಟ್ಟಿ ಪ್ರಕಟಿಸುವಂತೆ ಹಾಗೂ ಅದನ್ನು ನಮಗೂ ಕೊಡುವಂತೆ ತಿಳಿಸಿದ್ದೇವೆ’ ಎಂದು ಹೇಳಿದರು.
ವಸ್ತುಪ್ರದರ್ಶನವು ಪ್ರತಿ ಬಾರಿಯೂ ಸರಾಸರಿ 12 ಲಕ್ಷ ಮಂದಿ ಯನ್ನು ಸೆಳೆಯುತ್ತದೆ. ಈ ಬಾರಿ ಇನ್ನೂ ಅದ್ಧೂರಿ ಹಾಗೂ ವ್ಯವಸ್ಥಿತವಾಗಿ ಸಜ್ಜು ಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು.