ಇತ್ತೀಚಿನ ಸುದ್ದಿ
ಶಂಕಿತ ಉಗ್ರ ಚಟುವಟಿಕೆ ಹಿನ್ನೆಲೆ ಮಗನ ಬಂಧನ ; ಮಂಗಳೂರಿನಲ್ಲಿ ತಂದೆ ಹೃದಯಾಘಾತದಿಂದ ನಿಧನ
24/09/2022, 00:28

ಮಂಗಳೂರು(reporterkarnataka.com)ಭಯೋತ್ಪಾದಕ ಸಂಘಟನೆ ಐಸಿಸ್ ಜತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಶಿವಮೊಗ್ಗದಲ್ಲಿ ಬಂಧಿತನಾಗಿದ್ದ ಆರೋಪಿ ಮಾಝ್‌ನ ತಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಂಕಿತ ಉಗ್ರ ಮಾಝ್ ಮುನೀರ್ ಅಹಮದ್ ನ ತಂದೆ ಮುನೀರ್ ಅಹ್ಮದ್ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೃತ ಮುನೀರ್ ಅಹ್ಮದ್‌ರವರು ತೀರ್ಥಹಳ್ಳಿಯ ಮಾಜಿ ಪುರಸಭಾ ಸದಸ್ಯ ಕಾಂಗ್ರೆಸ್ ಮುಖಂಡ ದಿವಂಗತ ಸಾಬ್ಬಾನ್ ಸಾಹೇಬ್ ಅವರ ಮಗನಾಗಿದ್ದಾರೆ. ಮೃತದೇಹವನ್ನು ರಾತ್ರಿ ತೀರ್ಥಹಳ್ಳಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮುನೀರ್ ಅಹಮ್ಮದ್‌ರವರ ಮನೆ ತೀರ್ಥಹಳ್ಳಿ ಮೀನು ಮಾರ್ಕೆಟ್ ಹತ್ತಿರ ಸೊಪ್ಪುಗುಡ್ಡೆ ಎಂಬಲ್ಲಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಗ್ಗುಲಿನಲ್ಲಿ ಮನೆ ಮಾಡಿ ನೆಲೆಸಿದ್ದರು ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಮಗ ಮಾಝ್ ನನ್ನು ಮಂಗಳೂರು ಪೊಲೀಸರು ಗೋಡೆ ಬರಹವೊಂದರ ಆಪಾದನೆಯಲ್ಲಿ ಬಂಧಿಸಿದ್ದಾಗ ಮುನೀರ್ ಅತೀವ ರಕ್ತದೊತ್ತಡಕ್ಕೆ ಸಿಲುಕಿ ಬಳಲಿದ್ದರು. ಆ ಬಳಿಕ ಹೃದಯಕ್ಕೆ ಎರಡು ಸ್ಟಂಟುಗಳನ್ನು ಅಳವಡಿಸಲಾಗಿತ್ತು.
ಈಗ ಮತ್ತೊಮ್ಮೆ ತಮ್ಮ ಮಗನನ್ನು ದೇಶದ್ರೋಹದ ಶಂಕಿತ ಆರೋಪಿ ಎಂದು ಪರಿಗಣಿಸಿ ಕರೆದೊಯ್ಯಲಾಗಿದೆ ಎಂದು ತಿಳಿದ ಬಳಿಕ ವಿಪರೀತವಾಗಿ ನೊಂದಿದ್ದರು ಎನ್ನಲಾಗಿದೆ.