ಇತ್ತೀಚಿನ ಸುದ್ದಿ
ಬ್ಯಾಟರಿ ಚಾಲಿತ ರಿಕ್ಷಾ ಹಾಗೂ ಬಸ್, ಲಾರಿ, ಆಟೋಗಳ ರಿಫ್ಲೆಕ್ಟರ್ ಸ್ಟಿಕ್ಕರ್ ಸಮಸ್ಯೆ ಬಗೆಹರಿಸುವುದು ನನ್ನ ಜವಬ್ದಾರಿ: ಶಾಸಕ ಕಾಮತ್
23/09/2022, 20:23

ಮಂಗಳೂರು(reporterkarnataka.com):ನಗರದಲ್ಲಿ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಚೌಕಟ್ಟಿನಲ್ಲಿ ತರುವುದು ಹಾಗೂ ಸುಪ್ರಿಂ ಕೋರ್ಟ್ ಆದೇಶದನ್ವಯ ಬಸ್, ಲಾರಿ ಮತ್ತು ಆಟೋರಿಕ್ಷಾ ಮುಂತಾದ ವಾಹನಗಳಿಗೆ ಪ್ರತಿಫಲಿತ (ರಿಫ್ಲೆಕ್ಟರ್) ಸ್ಟಿಕ್ಕರ್ ಅಳವಡಿಸುವ ಕುರಿತು ಶಾಸಕ ವೇದವ್ಯಾಸ್ ಕಾಮತ್ ಅವರು ನೇತೃತ್ವ ವಹಿಸಿ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಭೇಟಿಯಾಗಿ ಮಹತ್ವದ ಸಭೆ ನಡೆಸಿದರು.
ನಗರದಲ್ಲಿ ಬ್ಯಾಟರಿ ಚಾಲಿತ ವಾಹನಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಚೌಕಟ್ಟಿನೊಳಗೆ ತರದಿರುವ ಕಾರಣ ಇಂಧನ ಚಾಲಿತ ರಿಕ್ಷಾ ಚಾಲಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿರುವ ಕಾರಣ ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ಜೀವನೋಪಾಯಕ್ಕಾಗಿ ಆಟೋ ರಿಕ್ಷಾವನ್ನೇ ನಂಬಿರುವ ಅಸಂಖ್ಯ ಇಂಧನ ಚಾಲಿತ ಆಟೋ ರಿಕ್ಷಾ ಚಾಲಕರ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವ ದೃಷ್ಟಿಯಿಂದ ಸಭೆ ನಡೆಸಲಾಗಿದ್ದು ಈ ಸಮಸ್ಯೆಯನ್ನು ಬಗೆ ಹರಿಸುವ ಜವಾಬ್ದಾರಿ ನಮ್ಮ ಮೇಲಿದೆ, ಅದನ್ನು ಸಮರ್ಪಕವಾಗಿ ನಿರ್ವಹಿಸಲಾಗುವುದು. ಹಾಗಾಗಿ ಇಂಧನ ಚಾಲಿತ ರಿಕ್ಷಾ ಚಾಲಕರು ಆತಂಕಪಡುವ ಅಗತ್ಯವಿಲ್ಲ. ಸಮಸ್ಯೆಯನ್ನು ಬಗೆಹರಿಸುವುದು ನನ್ನ ಜವಬ್ದಾರಿ ಎಂದು ಶಾಸಕ ಕಾಮತ್ ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಬಸ್, ಲಾರಿ ಹಾಗೂ ಆಟೋರಿಕ್ಷಾ ಸೇರಿದಂತೆ ವಾಹನಗಳಿಗೆ ಪ್ರತಿಫಲನ ಸ್ಟಿಕ್ಕರ್ ಅಳವಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅವೆಲ್ಲವನ್ನೂ ಸಮರ್ಥವಾಗಿ ಜಾರಿಗೊಳಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಕುರಿತು ಸಾರಿಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಸಭೆಯಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ ಪ್ರಸಾದ್, ಹೆಚ್ಚುವರಿ ಸಾರಿಗೆ ಆಯುಕ್ತರಾದ ಮಲ್ಲಿಕಾರ್ಜುನ್, ಆಯುಕ್ತರಾದ ಟಿ.ಎಚ್.ಎಂ ಕುಮಾರ್, ಬಸ್ ಸಂಘದ ಅಧ್ಯಕ್ಷರಾದ ಸುರೇಶ್ ನಾಯಕ್ ಉಪಸ್ಥಿತರಿದ್ದರು.