ಇತ್ತೀಚಿನ ಸುದ್ದಿ
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ : 2 ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್
15/09/2022, 09:38
ಬೆಲ್‌ಗ್ರೇಡ್(reporterkarnataka.com): ವಿನೇಶ್ ಫೋಗಟ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 2 ಪದಕಗಳನ್ನು ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸ್ವೀಡನ್‌ನ ಎಮ್ಮಾ ಜೋನ್ನಾ ಮಾಲ್ಮ್‌ಗ್ರೆನ್‌ರನ್ನು ಮಣಿಸಿದ್ದಾರೆ.
ಬುಧವಾರ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಕಂಚಿಗಾಗಿ ನಡೆದ ಸ್ಪರ್ಧೆಯಲ್ಲಿ 28ರ ಹರೆಯದ ವಿನೇಶ್ 8-0 ಅಂತರದಿಂದ ಜಯ ಸಾಧಿಸಿದರು. ವಿನೇಶ್ 2019ರಲ್ಲಿ ಕಝಕ್‌ಸ್ತಾನದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಕಂಚು ಜಯಿಸಿದ್ದರು. ಈ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಸೋತಿದ್ದ ವಿನೇಶ್ ಈ ಗೆಲುವು ಮಹತ್ವ ಪಡೆದಿದೆ.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿನೇಶ್ ಮಂಗೋಲಿಯದ ಖುಲನ್ ಬತ್ಖುಯೋಗ್ ವಿರುದ್ಧ ಸೋತಿದ್ದರು. ಖುಲನ್ ಫೈನಲ್‌ಗೆ ತಲುಪಿದ ಕಾರಣ ರಿಪಿಚೇಜ್ ಸುತ್ತಿನ ಮೂಲಕ ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್‌ನಲ್ಲಿ ಆಡುವ ಅವಕಾಶವನ್ನು ವಿನೇಶ್ ಪಡೆದರು. ರಿಪಿಚೇಜ್ ಸುತ್ತಿನಲ್ಲಿ ಕಝಕಿಸ್ತಾನದ ಎಶಿಮೋವಾರನ್ನು 4-0 ಅಂತರದಿಂದ ಸೋಲಿಸಿದ್ದರು.ಅಝರ್‌ಬೈಜಾನ್‌ನ ಎದುರಾಳಿ ಗುರ್ಬನೊವಾ ಗಾಯಗೊಂಡಿದ್ದ ಕಾರಣ ವಿನೇಶ್ ಕಂಚಿನ ಪದಕದ ಸುತ್ತಿಗೆ ತೇರ್ಗಡೆಯಾದರು.