ಇತ್ತೀಚಿನ ಸುದ್ದಿ
ಸಿಕಂದರಾಬಾದ್ ಎಲೆಕ್ಟ್ರಿಕ್ ವಾಹನಗಳ ಶೋ ರೂಮ್ನಲ್ಲಿ ಅಗ್ನಿ ದುರಂತ; ಮಹಿಳೆ ಸಹಿತ 8 ಮಂದಿ ಸಾವು
13/09/2022, 18:41
ಸಿಕಂದರಾಬಾದ್ (reporterkarnataka.com): ಎಲೆಕ್ಟ್ರಿಕ್ ವಾಹನಗಳ ಶೋ ರೂಮ್ನಲ್ಲಿ ದಿಢೀರ್ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 8 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.
ಸಿಕಂದರಾಬಾದ್ ಶೋ ರೂಮ್ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಶೋ ರೂಮ್ ಮೇಲ್ಭಾಗದಲ್ಲಿರುವ ಲಾಡ್ಜ್ನಲ್ಲಿ ತಂಗಿದ್ದವರಲ್ಲಿ 8 ಮಂದಿ ಉಸಿರುಗಟ್ಟಿ ದುರ್ಮರಣಕ್ಕೀಡಾಗಿದ್ದಾರೆ. ಮೃತರಲ್ಲಿ 7 ಮಂದಿ ಪುರುಷರು ಹಾಗೂ ಓರ್ವ ಮಹಿಳೆ ಸೇರಿದ್ದಾರೆ. ಉಳಿದಂತೆ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೋಮವಾರ ತಡರಾತ್ರಿ ಈ ಅಗ್ನಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆಯಿಂದ ಉಸಿರಾಡಲು ಸಮಸ್ಯೆಯಾಗಿ ಇವರೆಲ್ಲರೂ ದುರ್ಮರಣಕ್ಕೀಡಾಗಿದ್ದಾರೆ. ಮೃತರೆಲ್ಲರೂ 35 ರಿಂದ 40 ವರ್ಷದೊಳಗಿನವರು ಎನ್ನಲಾಗಿದೆ. ಮೃತರನ್ನು ವಿಜಯವಾಡ ಮೂಲದ ಎಂ ಹರೀಶ್, ಚೆನ್ನೈ ಮೂಲದ ಸೀತಾರಾಮನ್ ಹಾಗೂ ದೆಹಲಿಯ ವೀತೇಂದ್ರ ಎಂದು ಗುರುತಿಸಲಾಗಿದ್ದು, ಉಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.
ಭೀಕರ ಅಗ್ನಿ ದುರಂತ: ಐದು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿರುವ ಎಲೆಕ್ಟ್ರಿಕ್ ವಾಹನದ ಶೋರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ, ದಟ್ಟ ಹೊಗೆ ಹರಡಿದ್ದು, ಮೇಲ್ಮಹಡಿಯಲ್ಲಿರುವ ಲಾಡ್ಜ್ನ ಕೊಠಡಿಯಲ್ಲಿ ಹೊಗೆ ವ್ಯಾಪಿಸಿದೆ. ಅಲ್ಲಿ ವಾಸ್ತವ್ಯ ಹೂಡಿದ್ದ ಅನೇಕರಿಗೆ ಉಸಿರಾಡಲು ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದಾರೆ. ಲಾಡ್ಜ್ನ ವಿವಿಧ ಕೊಠಡಿ ಹಾಗೂ ಹೊರಗಡೆ ದಟ್ಟ ಹೊಗೆ ಸೇವಿಸಿರುವ ಕಾರಣ ಅನೇಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ವರದಿಯಾಗಿದೆ.
ಹೈದರಾಬಾದ್ನ ಪಾಸ್ಪೋರ್ಟ್ ಕಚೇರಿಯ ಪಕ್ಕದಲ್ಲಿ ರೂಬಿ ಲಕ್ಸುರಿ ಪ್ರೈಡ್ ಎಂಬ ಐದು ಅಂತಸ್ತಿನ ಕಟ್ಟಡವಿದೆ. ಇದರಲ್ಲಿ ಎಲೆಕ್ಟ್ರಿಕ್ ವಾಹನಗಳ ಶೋ ರೂಮ್ ನೆಲಮಾಳಿಗೆಯಲ್ಲಿದ್ದು, ಉಳಿದ ನಾಲ್ಕು ಕಟ್ಟಡಗಳಲ್ಲಿ ಹೋಟೆಲ್ ಕಮ್ ಲಾಡ್ಜ್ ಇದೆ. ಸೋಮರಾತ್ರಿ ರಾತ್ರಿ 9:40ರ ವೇಳೆ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದ್ದು, ತಕ್ಷಣವೇ ಶೋ ರೂಮ್ನಲ್ಲಿದ್ದ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಫೋಟಗೊಂಡಿವೆ. ಹೀಗಾಗಿ, ವಿಷಕಾರಿ ಹೊಗೆ ಲಾಡ್ಜ್ ರೂಂಗಳಿಗೆ ವ್ಯಾಪಿಸಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಸಚಿವರಾದ ತಲಸಾನಿ ಶ್ರೀನಿವಾಸ್ ಯಾದವ್, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹೋಟೆಲ್ನಲ್ಲಿ 25-30 ಪ್ರವಾಸಿಗರು ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. 8 ಜನರು ಸಾವನ್ನಪ್ಪಿದ್ದಾರೆಂದು ಹೈದರಾಬಾದ್ ಉತ್ತರ ವಲಯದ ಡಿಸಿಪಿ ಚಂದನಾ ದೀಪ್ತಿ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಕಚೇರಿ ಪರಿಹಾರ ಘೋಷಣೆ: ಸಿಕಂದರಾಬಾದ್ ಅಗ್ನಿ ಅವಘಡಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಾಣಹಾನಿ ಬೇಸರ ತಂದಿದೆ. ಮೃತರ ಕುಟುಂಬಗಳಿಗೆ ಸಂತಾಪ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದಿದ್ದಾರೆ. ಇದರ ಜೊತೆಗೆ PMNRFನಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿ ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.