ಇತ್ತೀಚಿನ ಸುದ್ದಿ
ಅಧಿಕಾರ ವಹಿಸಿದ ಮೊದಲ ದಿನವೇ ಕಾಲ್ ಫಾರ್ವಡ್ ಮಾಡಿಟ್ಟ ನೂತನ ಮೇಯರ್!: ಸಾರ್ವಜನಿಕರ ಸಂಪರ್ಕಕ್ಕೆ ಅಲಭ್ಯ!!
09/09/2022, 17:40
ಮಂಗಳೂರು(reporterkarnataka.com): ಹಲವು ಅನಿಶ್ಚಿತತೆಗಳನ್ನು ದಾಟಿ ಮಂಗಳೂರಿಗೆ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ನಡೆದಿದೆ. ಆದರೆ ನೂತನ ಮೇಯರ್ ಅವರನ್ನು ಮೊದಲ ದಿನ ಸಂಪರ್ಕಿಸಲು ನಾಗರಿಕರು ಯತ್ನಿಸಿದರೆ ಅವರು ಸಿಗಲಿಲ್ಲ. ಅವರು ಮೊಬೈಲ್ ಕಾಲ್ ಗಳನ್ನು ಫಾರ್ವಡ್ ಆಪ್ಶನ್ ನಲ್ಲಿಟ್ಟರೆ, ಇತ್ತ 5 ಗಂಟೆ ವರೆಗೂ ನಗರದ ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರಪಾಲಿಕೆ ಕಚೇರಿಗೂ ಬರಲಿಲ್ಲ.
ಪಾಲಿಕೆಯ ನೇತ್ರಾವತಿ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ ಜಯಾನಂದ ಅಂಚನ್ ಮತ್ತು ಪೂರ್ಣಿಮಾ ಅವರು ಆಯ್ಕೆಗೊಂಡಿದ್ದರು. ಮಧ್ಯಾಹ್ನ 12 ಗಂಟೆಗೆ ಮೇಯರ್ ಚುನಾವಣೆಯ ಪ್ರಕ್ರಿಯೆ ಆರಂಭಗೊಂಡಿತ್ತು. ಸುಮಾರು 1 ಗಂಟೆಯ ವೇಳೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು. ನಂತರ ಅಭಿನಂದನೆಗಳ ಪರ್ವ ಆರಂಭವಾಯಿತು. ಮಂಗಳೂರು ಉತ್ತರ ಮತ್ತು ದಕ್ಷಿಣದ ಶಾಸಕರಾದ ಡಾ. ವೈ.ಭರತ್ ಶೆಟ್ಟಿ ಹಾಗೂ ಡಿ. ವೇದವ್ಯಾಸ ಕಾಮತ್ ಅವರ ಜತೆ ಫೋಟೋ ಸೆಷನ್ ನಡೆಯಿತು. ವಿಜಯದ ಭರ್ಜರಿ ಊಟವೂ ನಡೆಯಿತು. ನಂತರ ನೂತನ ಮೇಯರ್ ಕಾಣಸಿಗಲಿಲ್ಲ. ಅವರ ಮೊಬೈಲ್ ಸಂಖ್ಯೆ 9448026583 ಕರೆ ಮಾಡಿದರೆ ಕಾಲ್ ಫಾರ್ವರ್ಡ್ ಮಾಡಲಾಗಿದೆ ಎಂಬ ಉತ್ತರ ಬರುತ್ತಿತ್ತು. ಇತ್ತ ಅವರು ಪಾಲಿಕೆಯಲ್ಲಿರುವ ಕಚೇರಿಗೂ 5 ಗಂಟೆ ತನಕ ಬರಲಿಲ್ಲ. ಹಾಗಾದರೆ ಮೇಯರ್ ಎಲ್ಲಿ ಹೋದರೂ ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ಕಚೇರಿಗೆ ಮೇಯರ್ ಹೋಗಿದ್ದರು ಎನ್ನಲಾಗಿದೆ. ಮೇಯರ್ ಎಲ್ಲಿಗೂ ಹೋಗಲಿ, ಆದರೆ ಅವರ ಮೊಬೈಲ್ ಕಾಲ್ ಅನ್ನು ಫಾರ್ವರ್ಡ್ ಮಾಡಿ ಇಡಬಾರದು ಎನ್ನುವುದು ಸಾರ್ವಜನಿಕರ ಅನಿಸಿಕೆ.