ಇತ್ತೀಚಿನ ಸುದ್ದಿ
ಬಂಗ್ರ ಕೂಳೂರು ಗೋಲ್ಡ್ ಪಿಂಚ್ ಸಿಟಿಯತ್ತ ಜನಸಾಗರ: ಕೆಲವೇ ತಾಸಿನಲ್ಲಿ ಕಡಲನಗರಿಗೆ ಪ್ರಧಾನಿ ಮೋದಿ ಆಗಮನ
02/09/2022, 12:30

ಮಂಗಳೂರು(reporterkarnataka.com): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಂಗ್ರ ಕೂಳೂರಿನ ಗೋಲ್ಡ್ ಪಂಚ್ ಸಿಟಿಯಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಗೋಲ್ಡ್ ಪಿಂಚ್ ಸಿಟಿಯತ್ತ ಜನಸಾಗರ ಹರಿಯಲಾರಂಭಿಸಿದೆ.
ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಂಡೋಪತಂಡವಾಗಿ ಗೋಲ್ಡ್ ಪಿಂಚ್ ಸಿಟಿಯತ್ತ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಬೆಳಗ್ಗೆ 11ರಿಂದ ಗೋಲ್ಡ್ ಪಂಚ್ ಸಿಟಿ ಮೈದಾನದತ್ತ ಜನರು ಮುಖ ಮಾಡಿದ್ದಾರೆ. ಮಂಗಳೂರಿನ ಪ್ರತಿ ವಾರ್ಡ್ ನಿಂದ ಜನರನ್ನು ಕಾರ್ಯಕ್ರಮಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ನಗರದಲ್ಲಿ ಬಹುತೇಕವಾಗಿ ಸಿಟಿ ಬಸ್, ಸರ್ವಿಸ್ ಬಸ್ ಓಡಾಟ ನಿಲ್ಲಿಸಿದೆ. ಒಂದು ರೀತಿಯಲ್ಲಿ ಕರ್ಫ್ಯೂ ವಾತಾವರಣ ನೆಲಸಿದೆ. ಪ್ರಧಾನಿ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ಮೋದಿ ಅವರು ಬಂದರು, ಒಳನಾಡು ಜಲಸಾರಿಗೆಗೆ ಸಂಬಂಧಿಸಿದ 8 ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸುವರು.
ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 3,800 ಕೋಟಿ ರೂ.ಗಳ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನಡೆಯಲಿದೆ.
ಪ್ರಧಾನಿ ಲೋಕಾರ್ಪಣೆ ಮಾಡುವ ಯೋಜನೆಗಳಲ್ಲಿ, ಕಂಟೇನರ್ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14 ರ ಯಾಂತ್ರೀಕರಣ ( 281 ಕೋಟಿ ರೂ.), ಬಿಎಸ್ VI ಉನ್ನತೀಕರಣ ಯೋಜನೆ (1829 ಕೋಟಿ ರೂ.), ಸಮುದ್ರ ನೀರಿನ ನಿರ್ಲವಣೀಕರಣ ಘಟಕ (677 ಕೋಟಿ ರೂ.) ಗಳು ಸೇರಿವೆ.
ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ, ಎನ್ಎಂಪಿಟಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ (ಅಂದಾಜು ವೆಚ್ಚ ರೂ. 500 ಕೋಟಿ), ಶೇಖರಣಾ ಟ್ಯಾಂಕ್ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ ( 100 ಕೋಟಿ ರೂ.), ಬಿಟುಮಿನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ 100 ಕೋಟಿ ರೂ.) ಹಾಗೂ ಬಿಟುಮಿನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ (ರೂ. 100 ಕೋಟಿ) ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಜೊತೆಗೆ, ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಲಿದ್ದಾರೆ.