ಇತ್ತೀಚಿನ ಸುದ್ದಿ
ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿಗೆ ಬಂಧನ ಭೀತಿ: ಪೀಠತ್ಯಾಗ ಮಾಡುತ್ತಾರಾ ಶ್ರೀಗಳು?
29/08/2022, 11:52
ಚಿತ್ರದುರ್ಗ(reporterkarnataka.com): ಬಸವ ತತ್ವಕ್ಕೆ ಹೆಸರು ಪಡೆದ ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಶರಣ ಸ್ವಾಮೀಜಿಗೆ ಬಂಧನ ಭೀತಿ ಎದುರಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಶ್ರೀಗಳು ಗುರಿಯಾಗಿದ್ದಾರೆ.
ಶ್ರೀಗಳ ವಿರುದ್ಧ ದೂರು ನೀಡಿರುವ ಇಬ್ಬರು ಬಾಲಕಿಯರನ್ನು ಸಿಡಬ್ಲ್ಯುಸಿ ಎದುರು ವಿಚಾರಣೆ ನಡೆಸಲಾಗಿದೆ. ಅಲ್ಲಿ ಇಬ್ಬರು ಬಾಲಕಿಯರು ಮುರಘ ಶ್ರೀಗಳಿಂದ ತಮಗೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಬಾಲಕಿಯರ ವೈದ್ಯಕೀಯ ಪರೀಕ್ಷೆಯೂ ಪೂರ್ಣಗೊಂಡಿದೆ. ಇದೀಗ ಬಾಲಕಿಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯಲಿದೆ. ಅಲ್ಲೂ ಬಾಲಕಿಯರು ಮುರುಘಾ ಮಠದ ಸ್ವಾಮೀಜಿಯಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದರೆ, ಶ್ರೀಗಳ ಬಂಧನ ಅನಿವಾರ್ಯವಾಗುತ್ತದೆ. ಪೊಲೀಸರು ಫೊಕ್ಸೊ ಕಾಯ್ದೆಯಡಿ ಸ್ವಾಮೀಜಿಯವರನ್ನು ಬಂಧಿಸಬೇಕಾಗುತ್ತದೆ.
ಮಠದ ಆಡಳಿತಕ್ಕೊಳಪಟ್ಟ ವಸತಿಗೃಹದಲ್ಲಿ ವಾಸವಾಗಿದ್ದ ಈ ಇಬ್ಬರು ಬಾಲಕಿಯರು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲಿ ಅವರ ದೂರನ್ನು ಸ್ವೀಕರಿಸಿಲ್ಲ. ಬಳಿಕ ಅವರು ಮೈಸೂರಿನ ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸಿದರು. ನಂತರ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂತು.