ಇತ್ತೀಚಿನ ಸುದ್ದಿ
ಧರ್ಮಸ್ಥಳದಲ್ಲಿ ತಲೆ ಎತ್ತಲಿದೆ ಮಿನಿ ವಿಮಾನ ನಿಲ್ದಾಣ: ಜತೆಗೆ 4 ಹೆಲಿಪ್ಯಾಡ್; ಶೀಘ್ರವೇ ಡಿಪಿಆರ್ ತಯಾರಿಗೆ ಸಿದ್ಧತೆ
28/08/2022, 22:59

ಬೆಳ್ತಂಗಡಿ(reporterkarnataka.com): ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಧರ್ಮಸ್ಥಳದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ 100 ಎಕರೆ ಜಾಗ ಗುರುತಿಸಲು ಮುಖ್ಯಮಂತ್ರಿ ಹಾಗೂ ಇತರ ಇಲಾಖೆ ಜತೆ ಚರ್ಚಿಸಲಾಗುವುದು ಎಂದು ವಸತಿ ಮತ್ತು ಮೂಲಭೂತ ಸೌಕರ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಧರ್ಮಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಅವರು ಬೆಳ್ತಂಗಡಿಯಲ್ಲಿ ಬಸವ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆಗಳ 1500 ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಿ ಮಾತನಾಡುತ್ತಾ ಹೇಳಿದರು.
ಭವಿಷ್ಯದ ಚಿಂತನೆಗಳೊಂದಿಗೆ ಎಟಿಆರ್ ಮತ್ತು ವಿಮಾನ ನಿಲ್ದಾಣದಲ್ಲಿ 10 ರಿಂದ 12 ಆಸನಗಳ ವಿಮಾನಗಳು ಇಳಿಯಬಹುದು, ಜೊತೆಗೆ ನಾಲ್ಕು ಹೆಲಿಪ್ಯಾಡ್‌ಗಳನ್ನು ಧರ್ಮಸ್ಥಳಕ್ಕೆ ಯೋಜಿಸಲಾಗಿದೆ. ಶೀಘ್ರದಲ್ಲೇ ಡಿಪಿಆರ್ ತಯಾರಿಸಿ ಸಂಪುಟದ ಅನುಮೋದನೆಗೆ ಕಳುಹಿಸಲಾಗುವುದು ಎಂದರು.
ಇನ್ನು ತಾಲೂಕಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಇನ್ನೂ 10 ಕೋಟಿ ರೂ.ಅನುದಾನ ನೀಡಲಾಗುವುದು ಎಂದ ಸಚಿವರು, ಎಲ್ಲ 48 ಪಂಚಾಯಿತಿಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ‘ಸಚಿವ ಸೋಮಣ್ಣ ಅವರು 1500 ಮನೆಗಳನ್ನು ಮಂಜೂರು ಮಾಡುವ ಮೂಲಕ ಪ್ರತಿಯೊಬ್ಬ ಫಲಾನುಭವಿಗೆ ಉತ್ತಮ ಮನೆ ಮತ್ತು ಉತ್ತಮ ಕುಟುಂಬದ ಕನಸನ್ನು ನನಸಾಗಿಸಿದ್ದಾರೆ. ತಾಲೂಕಿಗೆ ಇನ್ನೂ 5000 ಮನೆಗಳ ಅಗತ್ಯವಿದ್ದು, ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದಿದ್ದಾರೆ.