ಇತ್ತೀಚಿನ ಸುದ್ದಿ
ಮಾರ್ಚ್ ಅಂತ್ಯದೊಳಗೆ 16 ಲಕ್ಷ ಮನೆಗಳ ಹಸ್ತಾಂತರ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಚಿವ ವಿ.ಸೋಮಣ್ಣ
28/08/2022, 17:48
ಕುಕ್ಕೆಸುಬ್ರಹ್ಮಣ್ಯ(reporterkarnataka.com): ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದ 10 ಲಕ್ಷ ಮನೆಗಳೂ ಸೇರಿದಂತೆ ಒಟ್ಟು 16 ಲಕ್ಷ ಮನೆಗಳನ್ನು ಮಾರ್ಚ್ 9ರೊಳಗೆ ಫಲಾನುಭವಿಗಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ವಸತಿ ಮತ್ತು ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ವಸತಿ ಯೋಜನೆಯಡಿ 5 ಲಕ್ಷ ಮನೆಗಳನ್ನು ಗ್ರಾಮೀಣ ಪ್ರದೇಶಕ್ಕೆ, 1 ಲಕ್ಷ ಮನೆಗಳನ್ನು ನಗರ ಪ್ರದೇಶಕ್ಕೆ ನೀಡಿದ್ದಾರೆ. 2.34 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಗ್ರಾಮೀಣ ಭಾಗದಲ್ಲಿ ಆರಂಭವಾಗಿದೆ ಎಂದು ಸೋಮಣ್ಣ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸುಮಾರು 750 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ, ವಸತಿ ಯೋಜನೆಯಡಿ ಲಕ್ಷಾಂತರ ಮನೆಗಳನ್ನು ನೀಡಲಾಗಿದೆ. ಈಗಾಗಲೇ ಕೆಲಸ ಆರಂಭವಾಗಿದೆ ಎಂದರು.
ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ತಡೆಯುವ ಸಲುವಾಗಿ ಇಲಾಖೆಗೆ ಪ್ರತ್ಯೇಕ ಆ್ಯಪ್ ಮಾಡಲಾಗಿದೆ. ಈ ಮೂಲಕ ಪಾರದರ್ಶಕ ವ್ಯವಸ್ಥೆಗೆ ಯೋಜನೆ ಸಿದ್ಧಪಡಿಸಲಾಗಿದೆ. ನೆರೆ ಇತ್ಯಾದಿಗಳಿಂದ ಮನೆ ಹಾನಿಯಾದವರಿಗೆ ಪರಿಹಾರ ವಿತರಿಸಲು ಎ, ಬಿ, ಸಿ ಎಂಬ ವಿಂಗಡಣೆ ಇತ್ತು. ಅದನ್ನು ತೆಗೆದು ಹಾಕಿ ಸರಳೀಕರಣಗೊಳಿಸಲಾಗಿದೆ. ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ.ಭಟ್, ಶೋಭಾ ಗಿರಿಧರ್, ಎಇಒ ಪುಷ್ಪಲತಾ ರಾವ್, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್ ಇದ್ದರು.