ಇತ್ತೀಚಿನ ಸುದ್ದಿ
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನೆಲೆ ನಿಲ್ಲಲಿದೆ 21 ಅಡಿಯ ಬೃಹತ್ ಪರ್ವತಾಂಜನೇಯ ಮೂರ್ತಿ: ತುಮಕೂರಿನಿಂದ ಶಿಲೆ ಆಗಮನ
25/08/2022, 14:33
ಸಂತೋಷ್ ಅತ್ತಿಕೆರೆ ಚಿಕ್ಕ ಮಂಗಳೂರು
info.reporterkarnataka@gmail.com
ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ 21 ಅಡಿಯ ಬೃಹತ್ ಪರ್ವತಾಂಜನೇಯ ಮೂರ್ತಿ ನಿರ್ಮಾಣಗೊಳ್ಳಲಿದೆ. ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠ ಮಾರ್ಗದ ಕವಿಕಲ್‍ಗಂಡಿ ಎಂಬ ಸ್ಥಳದಲ್ಲಿರುವ ಆಂಜನೇಯನ ಗುಡಿ ಬಳಿ ಈ 21 ಅಡಿ ಎತ್ತರದ ಆಂಜನೇಯ ನೆಲೆ ನಿಲ್ಲಲಿದ್ದಾನೆ. ಈಗಾಗಲೇ ಮೂರ್ತಿ ಕೆತ್ತನೆ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಸಿದ್ಧತೆ ನಡೆದಿದ್ದು, ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಕೃಷ್ಣಶಿಲೆ ಕಲ್ಲುಗಳು ಕೂಡ ಚಿಕ್ಕಮಗಳೂರು ನಗರಕ್ಕೆ ಆಗಮಿಸಿವೆ. ನಗರದ ದ್ವಾರಬಾಗಿಲು ದಾಸರಹಳ್ಳಿ ಬಳಿ ಕಲ್ಲುಗಳಿಗೆ ಪೂಜೆ ಮಾಡಿ ಪುರಪ್ರವೇಶ ಮಾಡಿಕೊಳ್ಳಲಿದ್ದಾರೆ. ಕಲ್ಲಿನ ಜೊತೆ ಶಿಲ್ಪಿಗಳೂ ಕೂಡ ಆಗಮಿಸಿದ್ದಾರೆ.
ಮೂರ್ತಿಯನ್ನ ಪ್ರತಿಷ್ಠಾಪಿಸುವ ಜಾಗದಲ್ಲೇ ಕೆತ್ತನೇ ಮಾಡಬೇಕೋ ಅಥವ ಬೇರೇಡೆ ಕೆತ್ತನೆ ಮಾಡಿ ಅಲ್ಲಿಗೆ ಕೊಂಡೊಯ್ದು ಪ್ರತಿಷ್ಠಾಪಿಸಬೇಕೋ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಮೂರ್ತಿ ಕವಿಕಲ್‍ಗಂಡಿ ಬಳಿ ನೆಲೆ ನಿಂತರೇ ಸುತ್ತಮುತ್ತಲಿನ ಸುಮಾರು 30 ಕಿ.ಮೀ. ದೂರಕ್ಕೂ ಈ ಮೂರ್ತಿ ಕಾಣುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಸಾವಿರಾರು ಭಕ್ತರು ದತ್ತಪೀಠಕ್ಕೆ ಬಂದು ಪ್ರಕೃತಿ ಮಧ್ಯೆ ನೆಲೆಸಿರುವ ದತ್ತಾತ್ತೇಯರ ದರ್ಶನ ಮಾಡುತ್ತಿದ್ದಾರೆ. ಈ ಮೂರ್ತಿ ನೆಲೆ ನಿಂತರೇ ಕಾಫಿನಾಡು ದೇಶದ ಅತ್ಯಂತ ಹೆಸರಾಂತ ಪ್ರವಾಸಿ ತಾಣವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ದೇಶಾದ್ಯಂತ ಇರೋ ಲಕ್ಷಾಂತರ ಆಂಜನೇಯ ಭಕ್ತರು ಕಾಫಿನಾಡ ಪ್ರಕೃತಿ ಸೌಂದರ್ಯದ ಆಂಜನೇಯ ದರ್ಶನವನ್ನೂ ಪಡೆಯಲಿದ್ದಾರೆ.