ಇತ್ತೀಚಿನ ಸುದ್ದಿ
ಸ್ವಾತಂತ್ರ್ಯಅಮೃತೋತ್ಸವದಲ್ಲಿ ಮಿಂದೆದ್ದ ಕೆನರಾ: ಹರಿದು ಬಂದ ವಿದ್ಯಾರ್ಥಿ ಪ್ರವಾಹ; ಮೇಳೈಸಿದ ಯಕ್ಷಗಾನ ರೂಪಕ, ಮೋಹಿನಿಯಾಟ್ಟಂ, ಗುಜರಾತಿ ನೃತ್ಯ
15/08/2022, 22:03
ಮಂಗಳೂರು(reporterkarnataka.com): ದೇಶದ ಮಹನೀಯರ ತ್ಯಾಗ, ಬಲಿದಾನ, ನಿಸ್ವಾರ್ಥ ಬದುಕಿನ ದ್ಯೋತಕವಾದ ಸ್ವಾತಂತ್ರ್ಯವೆಂಬ ಹಕ್ಕಿ ರೆಕ್ಕೆ ಬಿಚ್ಚಿ ಹಾರಿ 75 ಸಂವತ್ಸರಗಳು ಕಳೆದು ರಾಷ್ಟ್ರ ಹೊಸ ಭರವಸೆಗಳ ಕಡೆ ಮುನ್ನಡೆಯುತ್ತಿದೆ. ದೇಶವಾಸಿಯ ಕಣಕಣದಲ್ಲೂ ರಾಷ್ಟ್ರಪ್ರೇಮದ ಸೌಗಂಧ ಸೂಸಬೇಕು, ತಾಯಿ ಭಾರತೀಯ ಪರಮ ವೈಭವ ಕಾಣಬೇಕು, ಇದಕ್ಕಾಗಿ ಪ್ರತಿಯೊಬ್ಬನಲ್ಲೂ ಹೊಸ ಚೈತನ್ಯದ ಶಕ್ತಿ ಉದ್ದಿಪನಗೊಳ್ಳಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ವಿದ್ಯಾಸಂಸ್ಥೆಗಳ ಸ್ವಾತಂತ್ರ್ಯೋತ್ಸವದ ಅಮೃತೋತ್ಸವವು ಸಂಭ್ರಮದಿಂದ ಕೆನರಾ ಹೈಸ್ಕೂಲ್ ಮೈನ್ ನ ಮೈದಾನದಲ್ಲಿ ಆಚರಿಸಲ್ಪಟ್ಟಿತು.
ಮಂಗಳೂರಿನ ಪ್ರಖ್ಯಾತ ಚರ್ಮರೋಗ ತಜ್ಞ ಶ್ರೀ ಗಣೇಶ್ ಪೈ ಅವರು ಅತಿಥಿಯಾಗಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಧ್ವಜವಂದನೆಯೊಂದಿಗೆ ರಾಷ್ಟ್ರಗೀತೆ ಮೊಳಗಿತು. ಸ್ಪರ್ಧಾತ್ಮಕ ಜಗತ್ತಿನ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುತ್ತಾ ನೈತಿಕತೆಯ ಎಳೆಗಳನ್ನು ನೇಯುತ್ತಾ ದೇಶಭಕ್ತಿಯ ರಕ್ಷಾ ಗುಚ್ಛದ ಪರಿಕಲ್ಪನೆಯನ್ನು ಬಿಂಬಿಸುವ ಶಿಕ್ಷಣ ನೀಡುವಲ್ಲಿ ಕೆನರಾ ವಿದ್ಯಾ ಸಂಸ್ಥೆ ಮುಂಚೂಣಿಯಲ್ಲಿದೆ. ಅದರ ಪ್ರತಿಫಲನವನ್ನು ಈ ಕಾರ್ಯಕ್ರಮದ ಮೂಲಕ ಎಲ್ಲರು ಕಾಣಲು ಸಾಧ್ಯವಾಯಿತು.
ಹಲವು ತೊರೆಗಳು ಹರಿದು ಒಂದುಗೂಡಿ ನದಿ ಪ್ರವಾಹವಾಗುವಂತೆ ವಿದ್ಯಾರ್ಥಿ ಪ್ರವಾಹ ಡೊಂಗರಕೇರಿ, ಕೆನರಾ ಮೈದಾನದಲ್ಲಿ ಹರಿಯಿತು. ಅತಿಥಿಗಳ ಆಗಮನವಾದಂತೆ ಶಾಲಾ ಪ್ರಾರ್ಥನೆ ಹಾಗೂ ವಂದೇ ಮಾತರಂ ಮೊಳಗಿತು. ಸ್ಥಾಪಕರ ಪ್ರತಿಮೆಗೆ ಮಾಲಾರ್ಪಣೆಯಾದ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿತು. ಧ್ವಜ ವಂದನೆಯ ಜೊತೆಗೆ ರಾಷ್ಟ್ರಗೀತೆಯು ಮೈದಾನದಲ್ಲಿ ಪ್ರತಿಧ್ವನಿಸಿತು. ನಂತರ ಕೆನರಾ ಸಂಸ್ಥೆಗಳ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಯಕ್ಷಗಾನ ರೂಪಕ, ಮೋಹಿನಿಯಾಟ್ಟಂ, ಗುಜರಾತಿ ನೃತ್ಯ, ದೇಶ್ ರಂಗೀಲಾ, ಪಂಜಾಬಿ, ಒಡಿಸ್ಸಿ, ಕಥಕ್, ಭರತನಾಟ್ಯ ನೃತ್ಯ ಪ್ರದರ್ಶನಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಛದ್ಮವೇಷಗಳು ಅನಾವರಣಗೊಂಡವು. ಇದರ ಜೊತೆಗೆ ಉದಯೋನ್ಮುಖ ಪ್ರತಿಭೆ ಅಖಿಲ್ ಶರ್ಮ ಇವರಿಂದ ಕುಂಚದಿಂದ ಚಿತ್ರ ಚಿತ್ತಾರಗಳು ಮೂಡಿಬಂದುವು. ದೇಶಭಕ್ತಿಯನ್ನು ಸಾರುವ ಹಾಡಿಗೆ ವಿದ್ಯಾರ್ಥಿ ಸಮೂಹ ನೃತ್ಯ ಮಾಡುತ್ತಾ ಸಮಾರಂಭಕ್ಕೆ ಹೊಸ ಕಳೆಯನ್ನು ತುಂಬಿದರು.
ಆಡಳಿತ ಮಂಡಳಿಯ ಮಾನ್ಯ ಕಾರ್ಯದರ್ಶಿ ಶ್ರೀ. ಎಂ. ರಂಗನಾಥ್ ಭಟ್, ಖಜಾಂಚಿ ಶ್ರೀ.ಎಂ. ವಾಮನ್ ಕಾಮತ್, ಸಹ ಖಜಾಂಚಿ ಶ್ರೀ. ಜಗನ್ನಾಥ್ ಕಾಮತ್, ಕೆನರಾ ಹೈಸ್ಕೂಲ್ ಮೈನ್ ಹಾಗೂ ಕನ್ನಡ ಪ್ರಾಥಮಿಕ ಶಾಲಾ ಸಂಚಾಲಕ ಬಸ್ತಿ ಪುರುಷೋತ್ತಮ ಶೆಣೈ, ಜಂಟಿ ಕಾರ್ಯದರ್ಶಿ ಹಾಗೂ ಕೆನರಾ ಇಂಗ್ಲೀಷ್ ಪ್ರಾಥಮಿಕ ಶಾಲೆ, ಕೆನರಾ ಸಿ.ಬಿ.ಎಸ್.ಇ ಸಂಚಾಲಕ ಕೆ.ಸುರೇಶ್ ಕಾಮತ್, ಜಂಟಿ ಕಾರ್ಯದರ್ಶಿ ಹಾಗೂ ಕೆನರಾ ಪದವಿಪೂರ್ವ ಕಾಲೇಜ್ ಸಂಚಾಲಕ ಟಿ ಗೋಪಾಲ್ ಕೃಷ್ಣ ಶೆಣೈ, ಕೆನರಾ ಪದವಿ ಕಾಲೇಜ್ ಮ್ಯಾನೇಜರ್ ಕೆ. ಶಿವಾನಂದ ಶೆಣೈ, ಕೆನರಾ ಪದವಿಪೂರ್ವ ಕಾಲೇಜ್ ಮ್ಯಾನೇಜರ್ ರಾಘವೇಂದ್ರ ಕುಡ್ವ, ಆಡಳಿತ ಮಂಡಳಿಯ ಸದಸ್ಯ ಎಂ ನರೇಶ್ ಶೆಣೈ, ಸಾರ್ವಜನಿಕ ಸಂಪರ್ಕಾಧಿಕಾರಿ ಉಜ್ವಲ ಮಲ್ಯ ಉಪಸ್ಥಿತರಿದ್ದರು.
ಕೆನರಾ ಸಂಸ್ಥೆಯ ಅಭಿಮಾನಿಗಳು, ಶಿಕ್ಷಕ ಶಿಕ್ಷಕೇತರ ಬಂಧುಗಳು, ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. R.J ಕಿರಣ್ ಶೆಣೈ, ಶಿಕ್ಷಕಿ ವಿಜೇತ ಕಾರ್ಯಕ್ರಮ ನಿರೂಪಿಸಿದರು.