ಇತ್ತೀಚಿನ ಸುದ್ದಿ
ಮಂಗಳೂರು ಮಣ್ಣಗುಡ್ಡೆ ಶಾಲೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಆಚರಣೆ
11/08/2022, 21:04

ಮಂಗಳೂರು(reporterkarnataka.com):ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಲೇಡಿಹಿಲ್(ಬಿಜೈ) ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮವು ಬುಧವಾರ ನಗರದ ಮಣ್ಣಗುಡ್ಡೆಯ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಇವರು ದ್ವೀಪ ಪ್ರಜ್ವಲನೆ ಹಾಗೂ ಜಂತುಹುಳ ನಿವಾರಣಾ ಮಾತ್ರೆಯನ್ನು ಮಕ್ಕಳಿಗೆ ನೀಡುವ ಮೂಲಕ ಮಾಡಿದರು.
ಅವರು ಮಾತನಾಡಿ, lಮಕ್ಕಳು ಭವಿಷ್ಯದಲ್ಲಿ ಉತ್ತಮ ಶಿಕ್ಷಣವನ್ನು ಪಡೆಯಲು ಉತ್ತಮವಾದ ಆರೋಗ್ಯವನ್ನು ಹೊಂದಿರಬೇಕು. ಉತ್ತಮ ಆರೋಗ್ಯವೆಂದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸದೃಢ ಹೊಂದಿರಬೇಕು. ಮಕ್ಕಳ ಭವಿಷ್ಯದಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ ಪಡೆಯುವ ಸಲುವಾಗಿ ಇಲಾಖೆಯು ವರ್ಷಕ್ಕೆ ಎರಡು ಬಾರಿ ಆರು ತಿಂಗಳ ಅಂತರದಲ್ಲಿ ಪ್ರತಿಯೊಂದು ಮಗುವು ಅಂದರೆ 1 ರಿಂದ 19 ವರ್ಷದೊಳಗ ಎಲ್ಲಾ ಮಕ್ಕಳಿಗೂ ಜಂತುಹುಳ ನಿವಾರಣಾ ಮಾತ್ರೆಯನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆಯನ್ನು ಕೊಡಿಸಿ, ಮಕ್ಕಳ ಆರೋಗ್ಯ ಸುಧಾರಣೆಹೊಂದಿ ಕಲಿಕೆಯಲ್ಲಿ ಏಕಾಗ್ರತೆಯನ್ನು ಸಾಧಿಸಲು ನೆರವಾಗಿ ಎಂದು ತಿಳಿಸಿದರು.
ಆರ್.ಸಿ.ಹೆಚ್ ಅಧಿಕಾರಿ ಡಾ.ರಾಜೇಶ್ ಮಾತನಾಡಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಉದ್ದೇಶ ಹಾಗೂ ಜಂತುಹುಳು ಹರಡಲು ಸಾಧ್ಯತೆಗಳು, ನಿವಾರಣೆಗಳು ಜಂತುಹುಳು ಭಾದೆಯ ಲಕ್ಷಣಗಳು, ಆರೋಗ್ಯದ ಮೇಲೆ, ಪೌಷ್ಠಿಕತೆಯ ಮೇಲೆ ಬೀರುವ ಪರಿಣಾಮಗಳು ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ, ಮಾತನಾಡಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಬಗ್ಗೆ ಸಂದರ್ಭೊಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣ್ಣಗುಡ್ಡೆ ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಸುರೇಶ್ ಚಂದ್ರ ಶೆಟ್ಟಿ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಯಲ್ಲಿ ಅನಾರೋಗ್ಯ ಉಂಟಾದಲ್ಲಿ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ, ಕಲಿಕೆಯ ಶಕ್ತಿ ಹಾಗೂ ಶಾಲಾ ಹಾಜರಾತಿಯಲ್ಲಿ ವ್ಯತ್ಯಾಸವಾಗುತ್ತಿದೆ ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದತ್ತ ಗಮನಕೊಡಬೇಕು, ಜೊತೆಗೆ ಶಾಲಾ ಶಿಕ್ಷಕರೂ ಕೂಡ ಶಾಲಾ ಹಂತದಲ್ಲಿ ಶಿಕ್ಷಣದೊಂದಿಗೆ ಮಕ್ಕಳಲ್ಲಿ ಆರೋಗ್ಯದ ಕಲ್ಪನೆಯನ್ನು ಮೂಡಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್,ದ.ಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪಾಪಬೋವಿ,ಲೇಡಿಹಿಲ್ ಪ್ರಾಥಮಿಕ ಕೇಂದ್ರ ವೈದ್ಯಧಿಕಾರಿ ಡಾ.ಜಯಶ್ರೀ,ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರು ಶಿವಕುಮಾರ್, ಮುಂತಾದವರು ಭಾಗವಹಿಸಿದ್ದರು.
ದ.ಕ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮ ನಿರೂಪಿ ದರು. ಗಣೇಶ್ ಕುಮಾರ್ ವಂದಿಸಿದರು.