ಇತ್ತೀಚಿನ ಸುದ್ದಿ
ಎಳ್ಳಾರೆಯ ಸದಾಶಿವ ಪ್ರಭುಗೆ ಐಎಎಸ್ ಗ್ರೇಡ್:ವಾಯುಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಧಿಕಾರಿ!
10/08/2022, 10:52

ಕಾರ್ಕಳ(reporterkarnataka.com): ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಎಳ್ಳಾರೆ ಸದಾಶಿವ ಪ್ರಭು ಅವರು ಐಎಎಸ್ ಅಧಿಕಾರಿಯಾಗಿ ಪದೋನ್ನತಿ ಪಡೆದಿದ್ದಾರೆ. ದೇಶದ 75 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರಕಾರವು ಅಧಿಸೂಚನೆ ಹೊರಡಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಳ್ಳಾರೆಯ ಬಿ. ಸದಾಶಿವ ಪ್ರಭು ವಾಯುಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಕಿರಿಯ ವಾರಂಟ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು. ನಂತರ , 2005ರಲ್ಲಿ ಮಂಗಳೂರಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಾತಿ ಹೊಂದಿದರು. 2006 ಬ್ಯಾಚ್ ನ ಕೆಎಎಸ್ ಪರೀಕ್ಷೆಯಲ್ಲಿ ಉತೀರ್ಣರಾಗಿ, 2008ರಲ್ಲಿ ಸಹಾಯಕ ಅಯುಕ್ತರಾಗಿ ಕೆಎಎಸ್ ಸೇವೆಗೆ ಸೇರ್ಪಡೆಗೊಂಡರು.
ಬಿಜಾಪುರದಲ್ಲಿ ಪ್ರಾಯೋಗಿಕ ತರಬೇತಿ ಮುಗಿಸಿದ ಬಳಿಕ ಅವಿಭಾಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹಾಯಕ ಕಮಿಷನರ್ ಅಗಿ ,ಬಳಿಕ ದ.ಕ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬಳಿಕ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದಾರೆ.