ಇತ್ತೀಚಿನ ಸುದ್ದಿ
ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20: ಸ್ಟಾರ್ ಆಟಗಾರರೊಂದಿಗೆ ಮಂಗಳೂರು ಯುನೈಟೆಡ್ ಸಜ್ಜು
03/08/2022, 23:12
ಮಂಗಳೂರು(reporterkarnataka.com): ಮೈಸೂರಿನಲ್ಲಿ ಆಗಸ್ಟ್ 7ರಂದು ಆರಂಭಗೊಳ್ಳಲಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಸೆಣಸಲಿರುವ ಮಂಗಳೂರು ಯುನೈಟೆಡ್ ತಂಡವು ಪ್ರಧಾನ ಕೋಚ್ ಸ್ಟುವರ್ಟ್ ಬಿನ್ನಿ ಅವರ ಗರಡಿಯಲ್ಲಿ ಪಳಗಿರುವ ಸ್ಟಾರ್ ಆಟಗಾರರನ್ನು ಅಂಗಣಕ್ಕಿಳಿಸಲಿದೆ.
ಸ್ಟುವರ್ಟ್ ಬಿನ್ನಿ ಮತ್ತು ಸಹಾಯಕ ಕೋಚ್ ಸಿ. ರಾಘವೇಂದ್ರ ಹಾಗೂ ಆಯ್ಕೆಗಾರರಾದ ಎಂ.ವಿ. ಪ್ರಶಾಂತ್ ಅವರು ಅಭಿನವ್ ಮನೋಹನ್ ಹಾಗೂ ಆರ್. ಸಮರ್ಥ್ ಅವರಂಥ ಆಟಗಾರರನ್ನು ಒಳಗೊಂಡಿರುವ ತಂಡವನ್ನು ಅಂಗಣಕ್ಕಿಳಿಸಲಿದ್ದಾರೆ.
ಮಂಗಳೂರಿನ ಫಿಜಾ ಬೈ ನೆಕ್ಸಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೆನನ್ ಮಾತನಾಡಿ, ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ಮಂಗಳೂರು ಜಿಲ್ಲೆಯು ತನ್ನದೇ ಆದ ತಂಡವನ್ನು ಹೊಂದಿದೆ ಎಂಬುದನ್ನು ಪ್ರಕಟಿಸಲು ಸಂತಸವಾಗುತ್ತಿದೆ. ಜುಲೈ 30ರಂದು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದ ಮಹಾ ಆಯ್ಕೆಯಲ್ಲಿ ನೇರಪ್ರಸಾರಗೊಳ್ಳಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಯುವ ಆಟಗಾರರಿಗೆ ಸ್ಪರ್ಧಿಸಲು ಉತ್ತಮ ಅವಕಾಶ ಸಿಕ್ಕಿದೆ ಎಂದರು.
ಮಂಗಳೂರು ಯುನೈಟೆಡ್ ತಂಡಕ್ಕೆ ಪ್ರಾಯೋಜಕತ್ವ ಮತ್ತು ಬೆಂಬಲವನ್ನು ನೀಡುತ್ತಿರುವುದನ್ನು ಪ್ರಕಟಿಸಲು ಫಿಜಾ ಸಮೂಹ ಸಂಸ್ಥೆಗಳು ಸಂಭ್ರಮ ವ್ಯಕ್ತಪಡಿಸಿವೆ. ಫಿಜಾ ಸಮೂಹ ಸಂಸ್ಥೆಗಳ ಸ್ಥಾಪಕ ಮತ್ತು ಸಿಎಂಡಿ ಎಂ.ಬಿ. ಫಾರೂಖ್ ಈ ಸಂದರ್ಭದಲ್ಲಿ ಮಾತನಾಡಿ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ಸ್ಪರ್ಧಿಸುತ್ತಿರುವ ಮಂಗಳೂರು ಯುನೈಟೆಡ್ ಪ್ರಾಯೋಜಕತ್ವ ನೀಡುತ್ತಿರುವುದು ನಿಜವಾಗಿಯೂ ಗೌರವದ ಸಂಗತಿ. ಮಂಗಳೂರಿನಲ್ಲಿ ಕ್ರಿಕೆಟ್ ಗುಣಮಟ್ಟ ಮತ್ತಷ್ಟು ಉತ್ತಮ ಗೊಳ್ಳಲು ಮತ್ತು ಯುವ ಕ್ರಿಕೆಟಗರಿಗೆ ಅವಕಾಶ ಸಿಗಲು ನಮ್ಮ ನೆರವು ಅನುಕೂಲವಾಗಲಿ ಎಂದರು.
ಮೈಸೂರಿನ ಮಹಾರಾಜ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸ್ಮರಣಾರ್ಥ ಪ್ರತಿಷ್ಠಿತ ಟಿ20 ಕ್ರಿಕೆಟ್ ಟೂರ್ನಿಯನ್ನು ನಡೆಸಲಾಗುತ್ತಿದೆ. ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯು ಆಗಸ್ಟ್ 7ರಿಂದ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಮೈಸೂರಿನಲ್ಲಿ ಮೊದಲ ಹಂತದಲ್ಲಿ 18 ಪಂದ್ಯಗಳು ನಡೆಯಲಿದ್ದು, ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯಲಿವೆ.ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಟೈಟಲ್ ಪ್ರಾಯೋಜಕತ್ವವನ್ನು ಶ್ರೀರಾಮ್ ಗ್ರೂಪ್ ವಹಿಸಲಿದೆ. ಮೂರು ವಾರಗಳ ಕಾಲ ನಡೆಯುವ ಟಿ20 ಕ್ರಿಕೆಟ್ ಹಬ್ಬದ ಪ್ರಾಯೋಜಕತ್ವವನ್ನು ಸ್ಟಾರ್‌ಸ್ಪೋರ್ಟ್ಸ್2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರಪ್ರಸಾರವಾಗಲಿದೆ.