ಇತ್ತೀಚಿನ ಸುದ್ದಿ
ಮಂದಾರ ಕೇಶವ ಭಟ್ ತುಳುವಿನ ಕುವೆಂಪು: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಡಾ. ಟಿ.ಸಿ. ಪೂರ್ಣಿಮಾ
02/08/2022, 12:21

ಮೂಡುಬಿದರೆ(reporterkarnataka.com): ಮೂಡಬಿದಿರೆಯ ಸ್ವಸ್ತಿ ಶ್ರೀ ಭಟ್ಟಾರಕ ಸಭಾ ಭವನದಲ್ಲಿ ನಡೆಯುತ್ತಿರುವ “ಏಳದೆ ಮಂದಾರ ರಾಮಾಯಣ” ವಾಚನ ಮತ್ತು ವ್ಯಾಖ್ಯಾನ (ಸುದೀಪು -ದುನಿಪು ) ಸಪ್ತಾಹ ಕಾರ್ಯಕ್ರಮದ ಎರಡನೇ ದಿನದ “ಅಯೋಧ್ಯ ಕಾಂಡ” ಅಧ್ಯಾಯ ಕಾವ್ಯಶ್ರೀ ಅಜೇರು, ಭರತರಾಜ್ ಶೆಟ್ಟಿ ಸಿದ್ದಕಟ್ಟೆ ಹಾಗೂ ಮುನಿರಾಜ ರೆಂಜಾಳ. ಅವರುಗಳ ಕಂಠಸಿರಿಯಲ್ಲಿ ಉತ್ತಮವಾಗಿ ಮೂಡಿ ಬಂತು.
ಮೂಡುಬಿದರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರಿಯ ಸ್ವಾಮೀಜಿ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ಏಳದೆ ಮಂದಾರ ರಾಮಾಯಣದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿಯವರು, ಮಂದಾರ ರಾಮಾಯಣ ಎನ್ನುವುದು ತುಳುವಿನ ಅಪೂರ್ವ ಗ್ರಂಥಗಳಲ್ಲಿ ಅಗ್ರಮಾನ್ಯ ಗ್ರಂಥ. ಕವಿ ಮಂದಾರ ಕೇಶವ ಭಟ್ಟರ ಈ ಮಹಾಕಾವ್ಯವನ್ನು ತುಳು ಭಾಷಿಗರ ಮನೆ ಮನೆಗಳಲ್ಲಿ ಪಠಣ ಮಾಡುವ ಮುಖಾಂತರ ಸುಖ ಶಾಂತಿ ನೆಮ್ಮದಿಯನ್ನ ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ. ಅವರು ಕವಿ ಮಂದಾರರು ತುಳು ರಾಮಾಯಣದ ಜೊತೆಗೆ ಕನ್ನಡ ಮಂದಾರ ರಾಮಾಯಣವನ್ನು ಕಲಾವಿದರು ಪ್ರಸ್ತುತಪಡಿಸಿದ ರೀತಿ ಉತ್ತಮವಾಗಿತ್ತು. ಮುಂದಿನ ದಿನಗಳಲ್ಲಿ ಕನ್ನಡ ಮಂದಾರ ರಾಮಾಯಣ ಕಾರ್ಯಕ್ರಮಕ್ಕೆ ಪರಿಷತ್ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಇತಿಹಾಸ ಸಂಶೋಧಕ ಡಾ. ಗಣಪಯ್ಯ ಭಟ್ ಮಾತನಾಡಿ ಕವಿ ಮಂದಾರರು ತುಳು ಹಾಗೂ ಕನ್ನಡ ಎರಡರಲ್ಲೂ ಮಂದಾರ ರಾಮಾಯಣವನ್ನು ರಚಿಸಿದ್ದು, ಇದು ಕವಿ ಮಂದಾರರಿಗೆ ಮಾತ್ರ ಸಾಧ್ಯ, ಇದೊಂದು ಸರ್ವಕಾಲಿಕ ದಾಖಲೆ, ಒಂದೇ ಕವಿ ಎರಡು ಭಾಷೆಗಳಲ್ಲಿ ರಾಮಾಯಣ ನಿರ್ಮಿಸಿದ ಚರಿತ್ರೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉನ್ನತ ಅಧಿಕಾರಿ ಡಾ. ಟಿ.ಸಿ. ಪೂರ್ಣಿಮಾ ಅವರು ಮಾತನಾಡಿ, ತುಳು ವಾಲ್ಮೀಕಿ, ಮಹಾಕವಿ, ವಿದ್ವಾನ್ ಮಂದಾರ ಕೇಶವ ಭಟ್ಟರು ತುಳುವಿಗೆ ಮಹತ್ವವಾದ ಆಕರ ಗ್ರಂಥ ನೀಡಿದ ತುಳುವಿನ ಕುವೆಂಪು.
ಇವರ ಮಂದಾರ ರಾಮಾಯಣ ಕನ್ನಡ ಮತ್ತು ತುಳು ಎರಡು ಕೃತಿಗಳನ್ನು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ, ನಾವೆಲ್ಲರೂ ಸೇರಿ ಈ ಕೈಂಕರ್ಯದಲ್ಲಿ ನಮ್ಮನ್ನ ತೊಡಗಿಸಿಕೊಳ್ಳೋಣ ಎಂದರು.
ಇದೇ ಸಂದರ್ಭದಲ್ಲಿ ಪತ್ರಿಕಾ ಸಂಪಾದಕ ಕೆ ವಿಠ್ಠಲ್ ಭಂಡಾರಿ ಹರಿಕಳ. ಅವರನ್ನು ಮಂದಾರ ಸನ್ಮಾನ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕೆ.ಪಿ. ಜಗದೀಶ್ ಅಧಿಕಾರಿ, ಹೆರಾಲ್ಡ್ ತಾವ್ರ್, ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಪ್ರಮೋದ್ ಸಪ್ರೆ ಪ್ರಾರ್ಥಿಸಿದರು, ಡಾ.ಮಂದಾರ ರಾಜೇಶ್ ಭಟ್ ಪ್ರಸ್ತಾವನೆ ಮತ್ತು ಸ್ವಾಗತ ಗೈದರು, ಡಾ. ರಾಜೇಶ್ ಆಳ್ವ ಕಾರ್ಯಕ್ರಮ ನಿರೂಪಸಿದರು.