ಇತ್ತೀಚಿನ ಸುದ್ದಿ
ರೋಗ ಪತ್ತೆ ಶೀಘ್ರವಾಗಿ ಮಾಡಿದಲ್ಲಿ ಕ್ಯಾನ್ಸರ್ ಕಾಯಿಲೆ ಗುಣಪಡಿಸಲು ಸಾಧ್ಯ: ಕಸ್ತೂರಬಾ ಮೆಡಿಕಲ್ ಕಾಲೇಜಿನ ಡಾ.ಪ್ರಶಾಂತ್ ಬಿ.
25/07/2022, 22:13
ಮಂಗಳೂರು(reporterkarnataka.com): ಕ್ಯಾನ್ಸರ್ ಗುಣಪಡಿಸಲಾರದ ರೋಗವೇನೂ ಅಲ್ಲ. ರೋಗ ಪತ್ತೆ ಶೀಘ್ರವಾಗಿ ಮಾಡಿದಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಲು ಸಾಧ್ಯ ಎಂದು ಕಸ್ತೂರಬಾ ಮೆಡಿಕಲ್ ಕಾಲೇಜಿನ ಡಾ.ಪ್ರಶಾಂತ್ ಬಿ.ಹೇಳಿದರು.
ಅವರು ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕದ್ರಿಯ ಲಯನ್ಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕುಳಿತೇ ಇರುವ ಜೀವನ ಶೈಲಿ, ವಿಟಮಿನ್ , ಜೀವಸತ್ವಗಳ ಕೊರತೆ, ದುರ್ಬಲವಾದ ರೋಗನಿರೋಧಕ ಶಕ್ತಿ , ಅನುವಂಶೀಯತೆ – ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರಲು ಸಾಧ್ಯವಿದೆ. ಆದಷ್ಟು ಹೊರಗಿನ ಆಹಾರಗಳಿಗೆ ಮೊರೆ ಹೋಗದೆ, ಪೌಷ್ಟಿಕಾಹಾರ ಸೇವನೆ, ಲಘು ವ್ಯಾಯಾಮ, ಒಂದಷ್ಟು ನಡಿಗೆ- ಹೀಗೆ ಜೀವನಶೈಲಿ ಯನ್ನು ಬದಲಿಸಿಕೊಂಡಲ್ಲಿ ಕ್ಯಾನ್ಸರ್ ನ್ನು ತಡೆಯಲು ಸಾಧ್ಯ ಎಂದು ಅವರು ಹೇಳಿದರು.
ಕ್ಯಾನ್ಸರ್ ನ ಗುಣಲಕ್ಷಣಗಳು, ಅದರ ಚಿಕಿತ್ಸೆ, ತಡೆಗಟ್ಟುವ ಬಗೆ ಇತ್ಯಾದಿಗಳ ಬಗ್ಗೆ ಸವಿವರವಾದ ಮಾಹಿತಿಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದರು.
ಕೆನರಾ ಕಾಲೇಜಿನ ರಾ.ಸೇ.ಯೋ.ಅಧಿಕಾರಿಗಳಾದ ಸೀಮಾ ಪ್ರಭು,ವಾಣಿ ಯು.ಎಸ್. ಹಾಗೂ ಕದ್ರಿ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಸುಮಿತ್ರಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಯನ್ ಶ್ರೀಧರ್, ಲಯನ್ ರಿತೇಶ್ ರಾವ್, ಲಯನ್ ಸತೀಶನ್, ಲಯನ್ ಪ್ರಶಾಂತ್ ಪೈ,ಲಯನ್ ಅಶೋಕ್ ಕಾಮತ್, ಲಯನ್ ವಿದ್ಯಾ ಕಾಮತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಭಿನ್ ಬಂಗೇರ ಸ್ವಾಗತಿಸಿದರು.ಪ್ರತೀಶ್ ಮಲ್ಲಿ ವಂದಿಸಿದರು.ಶರಣ್ಯ ಕಾರ್ಯಕ್ರಮ ನಿರೂಪಿಸಿದರು.