ಇತ್ತೀಚಿನ ಸುದ್ದಿ
ಇಂಟರ್ನೆಟ್ ಪಾಸ್ವರ್ಡ್ ರಿಸೆಟ್: ಕಾರ್ಕಳದ ವ್ಯಕ್ತಿಯ ಲಕ್ಷಾಂತರ ಹಣ ದೋಚಿದ ಖದೀಮರು
18/07/2022, 21:33
ಕಾರ್ಕಳ(reporterkarnataka.com): ಇಂಟರ್ನೆಟ್ ಪಾಸ್ವರ್ಡ್ ರಿಸೆಟ್ ಮಾಡಿ ವ್ಯಕ್ತಿಯೊಬ್ಬರ ಲಕ್ಷಾಂತರ ಹಣ ದೋಚಿದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಬಂಗ್ಲಾಗುಡ್ಡೆ ಯಲ್ಲಿ ನಡೆದಿದೆ.
ಕಾರ್ಕಳ ಕುಕ್ಕುಂದೂರು ಬಂಗ್ಲೆಗುಡ್ಡೆ ರುಡಾಲ್ಫ್ ಡಿ’ಸೋಜಾ(44) ಎಂಬವರು ಹಣ ಕಳೆದು ಕೊಂಡವರು.
ಅವರು 2018-19ನೆ ಸಾಲಿನ ಟಿಬಿಓ ಟಾಕ್ ಕಂಪೆನಿಯ ಸ್ಕೈಲೈನ್ ಎಂಟರ್‌ಪ್ರೈಸಸ್ ಮತ್ತು ಟ್ರಾವೆಲ್ಸ್‌ನಲ್ಲಿ ವಿಮಾನ, ರೈಲು ಟಿಕೆಟ್ ಬುಕ್ ಮಾಡುವ ಫ್ರಾಂಚೈಸಿ ಪಡೆದು ಸಂಸ್ಥೆಯ ಯೂಸರ್ ಐಡಿ ಹೊಂದಿದ್ದರು.
2022ರ ಎಪ್ರಿಲ್ ತಿಂಗಳಿನ ಕೊನೆಯಲ್ಲಿ ಟಿಬಿಓ ಕಂಪೆನಿಯಿಂದ ರುಡಾಲ್ಫ್ ಡಿ’ಸೋಜಾ ಅವರಿಗೆ ಕರೆ ಬಂದಿದ್ದು, ನಿಮ್ಮ ಐಡಿಗೆ 14,76,284 ರೂ. ಹಣ ಪಾವತಿಸಲಾಗಿದೆ. ಅದನ್ನು ಕೂಡಲೇ ಮರುಪಾವತಿ ಮಾಡುವಂತೆ ಸೂಚಿಸಲಾಗಿತ್ತು.ಆದರೆ ರುಡಾಲ್ಫ್ ಅವರು ಕಳೆದ ಎರಡು ವರ್ಷಗಳಿಂದ ಈ ಐಡಿಯನ್ನು ಬಳಸಿರುವುದಿಲ್ಲ. ಇವರ ಸಂಸ್ಥೆಯಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುವ ವ್ಯಕ್ತಿಯು ರುಡಾಲ್ಫ್ ಅವರ ಐಡಿಯನ್ನು ಕದ್ದು, ಇನ್ನೋರ್ವನ ಮೂಲಕ ಕಂಪೆನಿಯ ಐಡಿ ಪಾಸ್‌ವರ್ಡ್ ರೀಸೆಟ್ ಮಾಡಿಸಿದ್ದ.
ರುಡಾಲ್ಫ್ ಅವರಿಂದಲೇ ಐಡಿ ಯನ್ನು ಬಳಸುತ್ತಿರುವಂತೆ ಬಿಂಬಿಸಿ, ಕಂಪೆನಿಯಿಂದ ಬಂದಿರುವ ಹಣವನ್ನು ಟಿಕೆಟ್ ಬುಕ್ಕಿಂಗ್ ಖರ್ಚು ಮಾಡಿ, ಹಣ ಮರುಪಾವತಿಸದೇ ಕಂಪೆನಿಗೆ ಹಾಗೂ ರುಡಾಲ್ಫ್ ಡಿ’ಸೋಜಾ ಅವರಿಗೆ ನಷ್ಟ ಉಂಟು ಮಾಡಲಾಗಿದೆ ಎಂದು ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.