ಇತ್ತೀಚಿನ ಸುದ್ದಿ
ದಲಿತರ ಶೌಚಾಲಯ, ಸ್ನಾನಗೃಹ ಕಟ್ಟಡ ಸ್ಥಳ ಬದಲಾವಣೆಗೆ ಸಚಿವ ಅಂಗಾರ ಕಾರಣ: ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪ
16/07/2022, 17:52
ಸುಳ್ಯ(reporterkarnataka.com): ಇಲ್ಲಿನ ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲು ದಲಿತ ಕಾಲೋನಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡ ನಿರ್ಮಿಸಲು 30 ಲಕ್ಷ ಅನುದಾನ ಬಂದಿದ್ದು, ಬಂದಿರುವಂತ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕಾಲೋನಿ ಬಿಟ್ಟು ಸುಮಾರು ದೂರವಿರುವಂತ ಹಿಂದೂ ರುದ್ರಭೂಮಿಯೊಳಗಡೆ ಕಟ್ಟಡ ನಿರ್ಮಾಣ ಮಾಡಿ ಗೇಟಿಗೆ ಬೀಗ ಹಾಕಿರುತ್ತಾರೆ.
ಈ ಘಟನೆಗೆ ಸುಳ್ಯ ಶಾಸಕ ಹಾಗೂ ಸಚಿವ ಅಂಗಾರ ರವರು ಕಾರಣರಾಗಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪಿಸಿದೆ.
ಶೀಘ್ರದಲ್ಲಿ ಅದೇ 30 ಲಕ್ಷ ರೂಪಾಯಿ ಅನುದಾನದ ನೂತನ ಶೌಚಾಲಯ ಮತ್ತು ಸ್ನಾನ ಗೃಹ ಕಟ್ಟಡವನ್ನು ಕುಡಿಯಾಲ ಬೈಲು ದಲಿತ ಕಾಲೋನಿಯಲ್ಲಿ ನಿರ್ಮಿಸಿಕೊಡಬೇಕು, ಇಲ್ಲದಿದ್ದಲ್ಲಿ ಬಿಜೆಪಿ ಕಚೇರಿಯ ಮುಂಬಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕೊಡಿಯಾಳಬೈಲು ದಲಿತ ಕಾಲೋನಿಯಲ್ಲಿ ನಿರ್ಮಿಸಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಕಳೆದ ಒಂದು ತಿಂಗಳ ಮೊದಲು ಸುಳ್ಯ ತಾಲೂಕು ಪಂಚಾಯತ್ ಮುಂಬಾಗದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಸುಳ್ಯ ತಾಲೂಕು ಪಂಚಾಯಿತ್ ಕಾರ್ಯ ನಿರ್ವಹಣಾಧಿಕಾರಿ ಅವರು ಬಂದು ಜಿಲ್ಲಾ ಪಂಚಾಯಿತಿಗೆ ರಿಪೋರ್ಟ್ ಮಾಡಿದ್ದೇನೆ. ಅದು ಬಂದ ನಂತರ ನಿಮಗೆ ತಿಳಿಸುತ್ತೇನೆ. ಅದರ ನಂತರ ವಿಚಾರಣೆ ಮಾಡೋಣ ಈಗ ಈ ಪ್ರತಿಭಟನೆ ಕೈಬಿಡಿ ಎಂದು ಹೇಳಿದಾಗ ಪ್ರತಿಭಟನೆಯನ್ನು ತಕ್ಕಮಟ್ಟಿಗೆ ಕೈ ಬಿಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.