ಇತ್ತೀಚಿನ ಸುದ್ದಿ
ಕೆ.ಆರ್.ಪೇಟೆ ಶಂಕರ್ ಸ್ಪೋರ್ಟ್ಸ್ ಅಕಾಡೆಮಿಯಿಂದ ಅಂತರ್ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್
25/06/2022, 22:40
ಮಂಡ್ಯ(reporterkarnataka.com): ಕೆ.ಆರ್.ಪೇಟೆ ಪಟ್ಟಣದ ಶಂಕರ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಅಂತರ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಉದ್ಘಾಟನಾ ಸಮಾರಂಭ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್ ಅವರು ಮನ್ಮುಲ್ ನಿರ್ದೇಶಕ ಹೆಚ್.ಟಿ. ಮಂಜು, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್ ಅವರೊಂದಿಗೆ ಬ್ಯಾಡ್ಮಿಂಟನ್ ಆಟ ಆಡುವುದರ ಮೂಲಕ ಉದ್ಘಾಟಿಸಿ ಅಂತಾರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕಿಕ್ಕೇರಿ ಸುರೇಶ್ ಕ್ರೀಡೆಯು ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಂತರಾಗಿ ಸದಾ ಲವಲವಿಕೆಯಿಂದ ಇರಲು ಕ್ರೀಡೆಯು ಆರೋಗ್ಯ ಸಂವರ್ಧನೆಯ ಮೂಲವಾಗಿದೆ. ನಮ್ಮ ದೇಹದ ರಕ್ತ ಪರಿಚಲನೆಗೆ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿದೆ. ಮನುಷ್ಯನ ಮೆದುಳಿನ ಬೆಳವಣಿಗೆಯಲ್ಲಿ ಕ್ರೀಡೆಯು ಪ್ರಯೋಜನಕಾರಿಯಾಗಿದೆ. ಆದ್ದರಿಂದ ಕ್ರೀಡೆಗಳನ್ನು ವ್ಯಾಯಾಮದ ಅತ್ಯುತ್ತಮ ಸಾಧನವೆಂದು ಪರಿಗಣಿಸಲಾಗಿದೆ. ಮಾನವನ ದೇಹವನ್ನು ಶಕ್ತಿಯುತಗೊಳಿಸಲು ಕ್ರೀಡೆ ಸಹಕಾರಿಯಾಗಿದೆ ಎಂದು ಸುರೇಶ್ ಅಭಿಪ್ರಾಯಪಟ್ಟರು.
ಮನ್ಮುಲ್ ನಿರ್ದೇಶಕ ಹೆಚ್ ಟಿ ಮಂಜು ಮಾತನಾಡಿ, ಯಶಸ್ವಿ ವ್ಯಕ್ತಿಯು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿರಲು ಮಾನಸಿಕ ಬೆಳವಣಿಗೆಯು ನಮ್ಮ ಶಾಲಾ ದಿನಗಳಿಂದ ಪ್ರಾರಂಭವಾಗುತ್ತದೆ.ದೈಹಿಕ ಬೆಳವಣಿಗೆಗೆ ವ್ಯಾಯಾಮವು ಕ್ರೀಡೆಯ ಮೂಲಕ ಪಡೆಯುತ್ತೇವೆ. ಎರಡು ವಿಧದ ಕ್ರೀಡೆಗಳಿವೆ. ಇವುಗಳನ್ನು ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳು ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೇರಂ, ಹಾವು ಏಣಿ ಆಟ, ಚೆಸ್ ಆಟಗಳಿಂದ ಮನರಂಜನೆ ಮತ್ತು ಅರಿವಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಕ್ರಿಕೆಟ್, ಫುಟ್ಬಾಲ್, ಹಾಕಿ, ವಾಲಿಬಾಲ್, ಟೆನಿಸ್ ಮುಂತಾದ ಕ್ರೀಡೆಗಳು ದೇಹವನ್ನು ಸಮಗ್ರವಾಗಿ ಆರೋಗ್ಯವಾಗಿಡಲು ಪ್ರಯೋಜನಕಾರಿಯಾಗಿದೆ ಆದ್ದರಿಂದ ಎಲ್ಲರೂ ಕ್ರೀಡೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸಿ ಆರೋಗ್ಯವಂತ ಸಮಾಜಕ್ಕೆ ಕೈಜೋಡಿಸಬೇಕೆಂದು ಹೆಚ್.ಟಿ. ಮಂಜು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಂ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ಪುರಸಭಾ ಸದಸ್ಯರಾದ ಡಿ. ಪ್ರೇಂಕುಮಾರ್, ಗಿರೀಶ್, ಶಂಕರ್ ಸ್ಪೋರ್ಟ್ಸ್ ಅಕಾಡೆಮಿಯ ಮಾಲೀಕರಾದ ಶಂಕರ್, ದೀಪಿಕಾ, ಶಂಕರ್, ಪಿ.ಪ್ರವೀಣ್, ಶರತ್, ನಾಗೇಶ್, ಮಂಜುನಾಥ್, ದೇವೇಂದ್ರ, ಅರುಣ್, ಪ್ರಸನ್ನ, ನಾಗರಾಜು, ಜ್ಞಾನೇಶ್,ಧರಣಿ ಸೇರಿದಂತೆ ನೂರಾರು ಕ್ರೀಡಾಪಟುಗಳು ಹಾಜರಿದ್ದರು.