ಇತ್ತೀಚಿನ ಸುದ್ದಿ
ಹೈೂಗೆಬಜಾರ್ ಭಗತ್ ಸಿಂಗ್ ರಸ್ತೆ ದ್ವಿಪಥ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿ ಪೂಜೆ
24/06/2022, 19:52
ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯ ಹೈೂಗೆಬಜಾರ್ ಭಗತ್ ಸಿಂಗ್ ರಸ್ತೆಯನ್ನು ದ್ವಿಪಥಗೊಳಿಸಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಆ ಬಳಿಕ ಮಾತನಾಡಿದ ಅವರು, ಹೈೂಗೆಬಜಾರ್ ಮುಖ್ಯರಸ್ತೆಯಿಂದ ಧಕ್ಕೆಗೆ ಸಂಪರ್ಕಿಸುವ ಭಗತ್ ಸಿಂಗ್ ರಸ್ತೆ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯಿಂದ 1.40 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ರಸ್ತೆಯನ್ನು 9 ಮೀಟರ್ ಅಗಲಗೊಳಿಸಿ ರಸ್ತೆಯ ಇಕ್ಕೆಲಗಳಲ್ಲಿ ಮಳೆನೀರು ಹರಿದುಹೋಗಲು ಚರಂಡಿ ಹಾಗೂ ಪಾದಾಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು. ರಸ್ತೆಯುದ್ದಕ್ಕೂ ಬೀದಿ ದೀಪಗಳನ್ನು ಅಳವಡಿಸಿ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದರು.
ಧಕ್ಕೆಗೆ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ರಸ್ತೆಯ ಅಭಿವೃದ್ಧಿಯಿಂದ ಸಾರ್ವಜನಿಕರಿಗೆ ಹಾಗೂ ವಾಣಿಜ್ಯ ವ್ಯವಸ್ಥೆಗೆ ಸಾಕಷ್ಟು ಅನುಕೂಲವಾಗಿರಲಿದೆ. ಸದ್ಯ 2 ತಿಂಗಳ ಕಾಲ ಮೀನುಗಾರಿಕೆ ಸ್ಥಗಿತಗೊಂಡಿರುವ ಕಾರಣ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ವರ್ಷದಲ್ಲಿ ನಗರದ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಸಾಧಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಪಾಲಿಕೆ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಕಾರ್ಪೋರೇಟರ್ ರೇವತಿ ಶ್ಯಾಮ್ ಸುಂದರ್, ಬಿಜೆಪಿ ಮುಖಂಡರಾದ ವಿನೋದ್ ಮೆಂಡನ್, ನಾರಾಯಣ ಗಟ್ಟಿ, ವನಮಾಲ ಸುವರ್ಣ, ಅನಿಲ್ ಹೈೂಗೆಬಜಾರ್, ಯೋಗೀಶ್ ಚಾಂಚನ್, ಚೇತನ್ ಕೋಟ್ಯಾನ್, ವಿವೇಕ್ ಶೆಟ್ಟಿ, ವಿಕ್ಯಾತ್ ಶೆಟ್ಟಿ, ಸ್ಮಾರ್ಟ್ ಸಿಟಿ ಅಧಿಕಾರಿಗಳಾದ ಚಂದ್ರಕಾಂತ್, ಅರುಣ್ ಪ್ರಭ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.