ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಮುಂದಿನ 2 ವರ್ಷದಲ್ಲಿ 57 ಸಾವಿರ ಹೆಕ್ಟೇರ್ ಬಿದಿರ ಕಾಡು: ಅರಣ್ಯ ಸಚಿವ ಉಮೇಶ್ ಕತ್ತಿ
24/06/2022, 11:25
ಬೆಳ್ತಂಗಡಿ (reporterkarnataka.com): ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 57 ಸಾವಿರ ಹೆಕ್ಟೇರ್‍ಗಳಷ್ಟು ಬಿದಿರಿನ ಕಾಡನ್ನು ಬೆಳೆಸಲಾಗುವುದು ಎಂದು ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದರು.
ಅವರು ಬೆಳ್ತಂಗಡಿ ತಾಲೂಕಿನ ಬಡಕೋಡಿ ಗ್ರಾಮದ ಎರ್ಮೋಡಿ ಅರಣ್ಯ ಪ್ರದೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ ಹಾಗೂ ವೇಣೂರು ವಲಯದ ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ ಸಹಯೋಗದೊಂದಿಗೆ ರಾಜ್ಯದಲ್ಲಿ ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಬೆಳಗಾವಿ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಸವಳು ಭೂಮಿಯಲ್ಲಿ ಬಿದಿರು ಬೆಳೆಸಲು ಉದ್ದೇಶಿಸಲಾಗಿದೆ, ಆ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಅಂದಾಜು 57 ಸಾವಿರ ಹೆಕ್ಟೇರ್ ಬಿದಿರಿನ ಕಾಡನ್ನು ಬೆಳೆಸಲಾಗುವುದು ಎಂದ ಸಚಿವರು, ದೇಶದಲ್ಲಿ ಇತರೆ ರಾಜ್ಯಗಳಿಗಿಂತ ಕರ್ನಾಟಕ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ, ರಾಜ್ಯದಲ್ಲಿ 6,60,000 ಹೆಕ್ಟೇರ್ ಪ್ರದೇಶವನ್ನು ಡಿ ನೋಟಿಫಿಕೇಷನ್ ಮಾಡಿ ಕಂದಾಯ ಇಲಾಖೆಗೆ ನೀಡಲಾಗಿದ್ದು, ಅರಣ್ಯ ಇಲಾಖೆಯಿಂದ 3,30,000 ಹೆಕ್ಟೇರ್‍ನಲ್ಲಿ ಗಿಡ-ಮರಗಳನ್ನು ಬೆಳೆಸಲು ಯೋಜನೆ ರೂಪಿಸಲಾಗಿದೆ ಎಂದರು
ಕಳೆದ ವರ್ಷ ಕಾಡುಪ್ರಾಣಿಗಳಿಂದ ರೈತರಿಗಾದ ನಷ್ಟಕ್ಕೆ ಸರ್ಕಾರವು 20 ಕೋಟಿ ರೂ.ಗಳ ಪರಿಹಾರ ನೀಡಿದೆ, ಮನುಷ್ಯ ಹಾಗೂ ಪ್ರಾಣಿಗಳ ಮಧ್ಯೆ ಸಂಘರ್ಷ ತಡೆಯಲು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆರಂಭಿಸಿರುವ ಯೋಜನೆ ಅತ್ಯಂತ ಪ್ರಯೋಜನಕಾರಿಯಾಗಿದೆ, ಅದಕ್ಕೆ ಅರಣ್ಯ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಗಿಡ-ಮರಗಳನ್ನು ಬೆಳೆಸುವುದು, ಅವುಗಳನ್ನು ರಕ್ಷಿಸುವುದು ನಮ್ಮ ಜವಬ್ದಾರಿಯಾಗಿದೆ, ಆ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಸುಸ್ಥಿತಿಯ ಪ್ರಕೃತಿ-ಪರಿಸರವನ್ನು ಬಿಟ್ಟುಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ ಮಾರ್ಗದರ್ಶನವು ಇಂದು ದಶಲಕ್ಷ ಗಿಡಗಳನ್ನು ನಾಟಿ ಮಾಡುವ ಮಟ್ಟಕ್ಕೆ ಬಂದು ತಲುಪಿದೆ, ಆ ಮೂಲಕ ಮುಂದಿನ ಪೀಳಿಗೆಗೆ ಸುಂದರ ಹಾಗೂ ಶುದ್ಧ ಪ್ರಕೃತಿಯನ್ನು ನೀಡಲು ನಾವು ಬದ್ಧರಾಗುವುದರೊಂದಿಗೆ ರಾಜ್ಯ ಮತ್ತು ದೇಶಕ್ಕೆ ಪ್ರೇರಣೆಯಾಗಿದ್ದೇವೆ ಎಂದರು.
ದಕ್ಷಿಣ ಕನ್ನಡದ ಜನರು ಪ್ರಕೃತಿ ಪ್ರೇಮಿಗಳು, ದೈವ ದೇವರ ಹೆಸರಿನಲ್ಲಿ ಅನಾದಿ ಕಾಲದಿಂದಲೂ ಅರಣ್ಯ ಸಂಪತ್ತನ್ನು ಉಳಿಸುತ್ತಿದ್ದಾರೆ, ಈ ಕಾಳಜಿಯಲ್ಲಿ ಜಿಲ್ಲೆಯ ಜನರು ಸದಾ ಮುಂದಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, “ಬದುಕು ಮತ್ತು ಬದುಕಲು ಬಿಡು” ಎಂಬ ತತ್ವದಂತೆ ನಾವೂ ಬದುಕಿ, ಇತರರೂ ಸುಖ-ಶಾಂತಿ, ನೆಮ್ಮದಿಯಿಂದ ಬದುಕಲು ಬಿಡಬೇಕು. ಕಾಡಿನಲ್ಲಿ ಆಹಾರ ದೊರೆಯದೇ ಪ್ರಾಣಿಗಳು ನಾಡಿಗೆ ಬರುತ್ತವೆ, ಆದ್ದರಿಂದ ಕಾಡಿನಲ್ಲಿ ಹಣ್ಣಿನ ಗಿಡ-ಮರಗಳನ್ನು ಬೆಳೆಸಿ ಅವುಗಳ ಫಲಗಳನ್ನು ಪ್ರಾಣಿಗಳಿಗೆ ಬಿಟ್ಟುಕೊಡಬೇಕು, ಇದರಿಂದಾಗಿ ಕೃಷಿಗೆ ಪ್ರಾಣಿಗಳ ಉಪಟಳ ತಪ್ಪುತ್ತದೆ ಎಂದರು.
ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವುದರಿಂದ ಈ ಯೋಜನೆ ಯಶಸ್ವಿಯಾಗುತ್ತದೆ ಎಂದ ಅವರು, ಪ್ರಶಾಂತ ಪ್ರಕೃತಿ-ಪರಿಸರವನ್ನು ಪ್ರೀತಿಸಿ, ಗಿಡ-ಮರಗಳನ್ನು ಬೆಳೆಸಿ, ಫಲ-ಪುಷ್ಪಗಳನ್ನು ಪ್ರೀತಿಸಿ ಪರಿಸರಕ್ಕೆ ಹೊಂದಿಕೊಂಡು ನಾವು ಬದುಕಿದಾಗ ಪರಿಶುದ್ಧ ಆಮ್ಲಜನಕ ಎಲ್ಲರಿಗೂ ದೊರಕಿ ನಾವು ಆರೋಗ್ಯಪೂರ್ಣ ಜೀವನ ನಡೆಸಬಹುದು. ದಕ್ಷಿಣ ಕನ್ನಡದಲ್ಲಿ ಉತ್ತಮ ಮಳೆ, ಫಲವತ್ತಾದ ಮಣ್ಣು ಹಾಗೂ ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ ಇಲ್ಲಿನ ಪ್ರಕೃತಿ-ಪರಿಸರ ಎಲ್ಲರಿಗೂ ಆಕರ್ಷಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನೆಟಲ್‍ಕರ್, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸ್ಥಳೀಯ ಗ್ರಾಮ ಪಂಚಾಯತ್ ಕರುಣಾಕರ ಪೂಜಾರಿ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.