ಇತ್ತೀಚಿನ ಸುದ್ದಿ
ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ದರೆ, ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮ: ಜಿಪಂ ಸಿಇಒ ಡಾ. ಕುಮಾರ್ ಎಚ್ಚರಿಕೆ
18/06/2021, 07:33
ಮಂಗಳೂರು(reporterkarnataka news): ಬಿತ್ತನೆ ಬೀಜ, ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದ್ದರೆ ಅಥವಾ ಸರಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಡಾ.ಕುಮಾರ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರ್ವಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಗೊಬ್ಬರದ ದರಗಳನ್ನು ಫಲಕದಲ್ಲಿ ಪ್ರದರ್ಶಿಸಬೇಕು. ಹೋಬಳಿ ಮಟ್ಟದ ಎಲ್ಲಾ ರೈತ ಸಂಪರ್ಕ ಕೇಂದ್ರಗಳನ್ನು ಲಾಕ್‍ಡೌನ್ ಸಂದರ್ಭಲ್ಲಿಯೂ ನಿಗದಿತ ಅವಧಿಗೆ ತೆರೆದು ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಗೊಬ್ಬರ ಸೇರಿದ್ದಂತೆ ಮತ್ತಿತ್ತರ ಪರಿಕರಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಅಂದಾಜು 2,076 ಎಕರೆಯಷ್ಟು ಹಡಿಲು ಜಮೀನುಗಳು ಇದ್ದು ಇವುಗಳಲ್ಲಿ ರೈತರು ಬೆಳೆ ಬೆಳೆಯುವಂತೆ ಉತ್ತೇಜಿಸುವ ಕೆಲಸವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದು ಜಿಪಂ ಸಿಇಒ ಸಲಹೆ ನೀಡಿದರು.
ಬಿತ್ತನೆ ಬೀಜ ರಸಗೊಬ್ಬರ ಹಾಗೂ ಮತ್ತಿತ್ತರ ಪರಿಕರಗಳ ದಾಸ್ತಾನುಗಳ ಬಗ್ಗೆ ರೈತರಿಗೆ ತಿಳಿಸುವುದರ ಜೊತೆಗೆ ರೈತ ಮುಖಾಂಡರ ಸಭೆಗಳನ್ನು ಮಾಡಬೇಕು. ಕೃಷಿ ಪರಿಕರಗಳ ಮಾರಾಟ ಕೇಂದ್ರಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಹಾಗೂ ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಬೇಕು ಎಂದರು.
ಮಂಗಳೂರು ಜಂಟಿ ಕೃಷಿ ನಿರ್ದೇಶಕಿ ಸೀತಾ ಎಮ್.ಸಿ, ಉಪಕೃಷಿ ನಿರ್ದೇಶಕ ಮಂಗಳೂರು ವಿಭಾಗ ಬಾನುಪ್ರಕಾಶ್, ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್, ಪುತ್ತೂರು ವಲಯ ಉಪ ಕೃಷಿ ನಿರ್ದೇಶಕ ಶಿವಶಂಕರ ದಾನೇಗೌಡ, ಬಂಟ್ವಾಳ ತಾಂತ್ರಿಕ ಅಧಿಕಾರಿ ನಂದನ್ ಶೆಣೈ, ಪುತ್ತೂರು ಸುಳ್ಯ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ಮತ್ತು ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಉಪಸ್ಥಿತರಿದ್ದರು.