ಇತ್ತೀಚಿನ ಸುದ್ದಿ
2 ಸಾವಿರ ರೂ. ನೋಟು ಚಲಾವಣೆ ಕುಸಿತ: ಯಾವ ನೋಟು ಎಷ್ಟು ಚಲಾವಣೆ? ಆರ್ ಬಿಐ ವಾರ್ಷಿಕ ವರದಿ ಹೇಳಿದ್ದೇನು?
29/05/2022, 08:21
ಹೊಸದಿಲ್ಲಿ(reporterkarnataka.com): 2 ಸಾವಿರ ರೂ. ಮುಖಬೆಲೆಯ ಬ್ಯಾಂಕ್ ನೋಟುಗಳ ಚಲಾವಣೆಯು ನಿರಂತರವಾಗಿ ಕುಸಿತ ಕಾಣುತ್ತಿದೆ. ವರ್ಷದಲ್ಲಿ 214 ಕೋಟಿ ಅಥವಾ ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ ನೋಟುಗಳ ಶೇಕಡಾ 1.6ರಷ್ಟು ಚಲಾವಣೆ ಇಳಿಕೆ ಕಂಡಿದೆ ಎಂದು ಆರ್‌ಬಿಐ ವಾರ್ಷಿಕ ವರದಿ ಹೇಳಿದೆ.
ಚಲಾವಣೆಯಲ್ಲಿರುವ ಎಲ್ಲಾ ಮುಖಬೆಲೆಯ ಕರೆನ್ಸಿ ನೋಟುಗಳ ಒಟ್ಟು ಸಂಖ್ಯೆಯು ಈ ವರ್ಷದ ಮಾರ್ಚ್ ವೇಳೆಗೆ 13,053 ಕೋಟಿಗಳಷ್ಟಿದೆ. ಇದು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 12,437 ಕೋಟಿಗಳಷ್ಟು ಹೆಚ್ಚಾಗಿದೆ. ಮಾರ್ಚ್ 2020 ರ ಅಂತ್ಯದ ವೇಳೆಗೆ, ಚಲಾವಣೆಯಲ್ಲಿರುವ 2,000 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ 274 ಕೋಟಿಯಷ್ಟಿತ್ತು. ಇದು ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ ನೋಟುಗಳ ಶೇ. 2.4 ರಷ್ಟಿದೆ. ಆದರೆ ಮಾರ್ಚ್ 2021 ರ ಹೊತ್ತಿಗೆ ಚಲಾವಣೆಯಲ್ಲಿರುವ ಒಟ್ಟು ಬ್ಯಾಂಕ್ ನೋಟುಗಳ 245 ಕೋಟಿ ಅಥವಾ ಶೇಕಡಾ 2 ಕ್ಕೆ ಇಳಿದಿದೆ. ಕಳೆದ ಆರ್ಥಿಕ ವರ್ಷದ ಕೊನೆಯಲ್ಲಿ 214 ಕೋಟಿ ಅಥವಾ ಶೇಕಡಾ 1.6 ಕ್ಕೆ ಕುಸಿದಿದೆ. ಮೌಲ್ಯದ ಲೆಕ್ಕಾಚಾರದಲ್ಲಿ ನೋಡಿದಾಗ ರೂಪಾಯಿ 2,000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿರುವ 2,000 ಕರೆನ್ಸಿ ನೋಟುಗಳ ಒಟ್ಟು ಮೌಲ್ಯದ ಶೇಕಡ 22.6 ರಷ್ಟರಿಂದ ಮಾರ್ಚ್ 2021 ರ ಅಂತ್ಯದ ವೇಳೆಗೆ ಶೇಕಡ 17.3ಕ್ಕೆ ಇಳಿದಿದೆ. ಮಾರ್ಚ್ 2022 ರ ಅಂತ್ಯದ ವೇಳೆಗೆ ಶೇಕಡ 13.8ಕ್ಕೆ ಇಳಿದಿದೆ.
500, 10 ರೂಪಾಯಿ ನೋಟು ಎಷ್ಟಿದೆ…?: ವರದಿಯ ಪ್ರಕಾರ, ಚಲಾವಣೆಯಲ್ಲಿರುವ 500 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ ಈ ವರ್ಷದ ಮಾರ್ಚ್ ಅಂತ್ಯಕ್ಕೆ 4,554.68 ಕೋಟಿಗೆ ಏರಿದೆ. ಹಿಂದಿನ ವರ್ಷದ ಅವಧಿಯಲ್ಲಿ 3,867.90 ಕೋಟಿ ಇತ್ತು. ಒಟ್ಟು ನೋಟಿನಲ್ಲಿ ರೂಪಾಯಿ 500 ಮುಖಬೆಲೆಯ ನೋಟುಗಳು ಗರಿಷ್ಠವಾಗಿದೆ. ಒಟ್ಟು ನೋಟುಗಳ 34.9 ಶೇಕಡಾ ಐನ್ನೂರು ರೂಪಾಯಿ ನೋಟುಗಳೇ ಇದೆ. ನಂತರ 10 ರೂಪಾಯಿ ನೋಟುಗಳು ಇದೆ. ಮಾರ್ಚ್ 31, 2022ರವರೆಗೆ ಚಲಾವಣೆಯಲ್ಲಿರುವ ಒಟ್ಟು ಬ್ಯಾಂಕ್ ನೋಟುಗಳಲ್ಲಿ 21.3 ಪ್ರತಿಶತ 10 ರೂಪಾಯಿ ನೋಟುಗಳು ಆಗಿದೆ.
500 ರೂ. ಚಲಾವಣೆ ಅಧಿಕ: ರೂಪಾಯಿ 500 ಮುಖಬೆಲೆಯ ನೋಟುಗಳು ಮಾರ್ಚ್ 2021 ರ ಅಂತ್ಯದ ವೇಳೆಗೆ 31.1 ಶೇಕಡಾ ಪಾಲನ್ನು ಮತ್ತು ಮಾರ್ಚ್ 2020 ರ ವೇಳೆಗೆ 25.4 ಶೇಕಡಾ ಪಾಲನ್ನು ಹೊಂದಿವೆ. ಮೌಲ್ಯದ ಲೆಕ್ಕಾಚಾರದಲ್ಲಿ ನೋಡಿದಾಗ ಈ ನೋಟುಗಳು ಮಾರ್ಚ್ 2020 ರಿಂದ ಮಾರ್ಚ್ 2022 ರವರೆಗೆ ಶೇಕಡಾ 60.8 ರಿಂದ ಶೇಕಡಾ 73.3 ಕ್ಕೆ ಏರಿದೆ. ಎಲ್ಲಾ ಮುಖಬೆಲೆಯ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 2021 ರ ಅಂತ್ಯದ ವೇಳೆಗೆ ರೂಪಾಯಿ 28.27 ಲಕ್ಷ ಕೋಟಿಯಿಂದ ಈ ವರ್ಷದ ಮಾರ್ಚ್ ಅಂತ್ಯಕ್ಕೆ ರೂಪಾಯಿ 31.05 ಲಕ್ಷ ಕೋಟಿಗೆ ಏರಿದೆ.
500, 2000 ನೋಟುಗಳ ಪಾಲೆಷ್ಟು…?: ಇನ್ನು ಮೌಲ್ಯದ ಲೆಕ್ಕಾಚಾರದಲ್ಲಿ ನೋಡಿದಾಗ ರೂಪಾಯಿ 500 ಮತ್ತು ರೂಪಾಯಿ 2000 ನೋಟುಗಳ ಪಾಲು ಮಾರ್ಚ್ 31, 2022 ರಂತೆ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯದ 87.1 ಪ್ರತಿಶತವಾಗಿದೆ. ಮಾರ್ಚ್ 2021 ರ ಅಂತ್ಯದ ವೇಳೆಗೆ 85.7 ಪ್ರತಿಶತದಷ್ಟಿತ್ತು ಎಂದು ವರದಿ ಉಲ್ಲೇಖ ಮಾಡಿದೆ.
ಯಾವೆಲ್ಲಾ ನೋಟುಗಳು ಚಾಲ್ತಿಯಲ್ಲಿದೆ…?: ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೌಲ್ಯ ಮತ್ತು ಪ್ರಮಾಣವು 2020-21ರ ಅವಧಿಯಲ್ಲಿ ಕ್ರಮವಾಗಿ 16.8 ಮತ್ತು 7.2 ಪ್ರತಿಶತವಾಗಿದೆ. 2021-22ರಲ್ಲಿ ಕ್ರಮವಾಗಿ 9.9 ಮತ್ತು 5 ಪ್ರತಿಶತದಷ್ಟು ಹೆಚ್ಚಾಗಿದೆ. ಚಲಾವಣೆಯಲ್ಲಿರುವ ಕರೆನ್ಸಿ (CiC) ಬ್ಯಾಂಕ್ ನೋಟುಗಳು ಹಾಗೂ ನಾಣ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಭಾರತೀಯ ರಿಸರ್ವ್ ಬ್ಯಾಂಕ್ (RBI) ₹ 2, ₹ 5, ₹ 10, ₹ 20, ₹ 50, ₹ 100, ₹ 200, ₹ 500 ಮತ್ತು ₹ 2000 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುತ್ತದೆ. ಚಲಾವಣೆಯಲ್ಲಿರುವ ನಾಣ್ಯಗಳು 50 ಪೈಸೆ ಮತ್ತು ₹ 1, ₹ 2, ₹ 5, ₹ 10 ಮತ್ತು ₹ 20 ಮುಖಬೆಲೆಯದ್ದಾಗಿದೆ.