ಇತ್ತೀಚಿನ ಸುದ್ದಿ
ಅಪಘಾತದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಸಾವು: ಕ್ರೀಡಾ ಜಗತ್ತು ಕಂಬನಿ
15/05/2022, 19:10
ಕ್ವೀನ್ಸ್‌ಲ್ಯಾಂಡ್(reporterkarnataka.com): ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್(46 )ಕಾರು ಅಪಘಾತದಲ್ಲಿ ಮೃತಪಟ್ಟಿರುವುದಕ್ಕೆ ಇಡೀ ಕ್ರೀಡಾ ಜಗತ್ತೇ ಕಂಬನಿ ಮಿಡಿದಿದೆ.
ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆಯಲ್ಲಿರುವ ಅವರ ನಿವಾಸದ ಬಳಿ ಶನಿವಾರ ರಾತ್ರಿ ಕಾರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಸೈಮಂಡ್ಸ್ ದುರಂತ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸೈಮಂಡ್ಸ್ ನಿಧನದ ಸುದ್ದಿ ಕೇಳಿ ಕ್ರೀಡಾ ಜಗತ್ತು ಆಘಾತ ವ್ಯಕ್ತಪಡಿಸಿದೆ. ಸೆಲೆಬ್ರಿಟಿಗಳು, ಮಾಜಿ ಆಟಗಾರರು ಮತ್ತು ಕ್ರೀಡಾಭಿಮಾನಿಗಳು ಸೈಮಂಡ್ಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸೈಮಂಡ್ಸ್ 1998ರಲ್ಲಿ ಪಾಕಿಸ್ತಾನದ ವಿರುದ್ಧ ಒನ್ ಡೇ ಇಂಟರ್‌ನ್ಯಾಷನಲ್ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 198 ಏಕದಿನ ಪಂದ್ಯಗಳಲ್ಲಿ 5,088 ರನ್ ಗಳಿಸಿದ್ದು, ಇದರಲ್ಲಿ 30 ಅರ್ಧ ಶತಕಗಳು ಮತ್ತು ಆರು ಶತಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಅನೇಕ ಸಂದರ್ಭಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಹರ್ಭಜನ್ vs ಸೈಮಂಡ್ಸ್ ನಡುವಿನ ವಿವಾದವು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯವಾಗಿದೆ. ಮಂಕಿ ಗೇಟ್ ವಿವಾದದ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವೆ ತೀವ್ರ ಉದ್ವಿಗ್ನ ವಾತಾವರಣವಿತ್ತು. ಈ ಘಟನೆಯು ಸೈಮಂಡ್ಸ್ ಜೊತೆಗೆ ಹರ್ಭಜನ್ ಅವರ ವೃತ್ತಿಜೀವನದ ಮೇಲೆ ಪ್ರಭಾವ ಬೀರಿತು. 2008 ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸೈಮಂಡ್ಸ್ ಅನ್ನು ಹರ್ಭಜನ್ ಸಿಂಗ್ ಕೋತಿಗೆ ಹೋಲಿಸಿದ್ದು ಆ ಸಮಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು.
ಜನಾಂಗೀಯ ನಿಂದನೆ ಮಾಡಿದ ಆರೋಪದ ಮೇಲೆ ಹರ್ಭಜನ್ ಸಿಂಗ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮೂರು ಪಂದ್ಯಗಳ ನಿಷೇಧ ಹೇರಿತ್ತು. ನಿಷೇಧ ಹಿಂಪಡೆಯದಿದ್ದರೆ ಇಡೀ ಸರಣಿಯನ್ನು ಬಹಿಷ್ಕರಿಸುವುದಾಗಿ ಟೀಂ ಇಂಡಿಯಾ ಆಟಗಾರರು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸಿಎ ತಮ್ಮ ನಿರ್ಧಾರವನು ಹಿಂಪಡೆದಿತ್ತು. ಸೈಮಂಡ್ಸ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಈ ಘಟನೆಯಿಂದ ತೀವ್ರವಾಗಿ ದುಃಖಿತರಾಗಿದ್ದರು ಎಂದು ಹಲವಾರು ಸಂದರ್ಭಗಳಲ್ಲಿ ಬಹಿರಂಗಪಡಿಸಿದ್ದಾರೆ.2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸೈಮಂಡ್ಸ್ ನಿವೃತ್ತಿ ಘೋಷಣೆ ಮಾಡಿದರು. ಎರಡು ಬಾರಿ ಆಸಿಸ್ ವಿಶ್ವಕಪ್ ಗೆಲುವಿನ ಭಾಗವಾಗಿದ್ದರು. ಶೇನ್ ವಾರ್ನ್ ನಿಧನದ ಸುದ್ದಿ ಅರಗಿಸಿಕೊಳ್ಳುವ ಮುನ್ನವೇ ಕ್ರಿಕೆಟ್ ಆಸ್ಟ್ರೇಲಿಯಾಗೆ ಸೈಮಂಡ್ಸ್ ನಿಧನ ದೊಡ್ಡ ಆಘಾತ ತಂದಿದೆ.