ಇತ್ತೀಚಿನ ಸುದ್ದಿ
ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿಗೆ ಮರುಳು ಮಾಫಿಯಾ ನಂಟು?: ದಿವ್ಯಾ ಹಾಗರಗಿಗೆ 18 ದಿನ ಆಶ್ರಯ ನೀಡಿದ್ದು ಯಾರು?
02/05/2022, 09:34
ಕಲಬುರಗಿ(reporterkarnataka.com): ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ಆರೋಪದ ಹಿನ್ನೆಲೆ ಬಂಧಿತರಾದ ದಿವ್ಯಾ ಹಾಗರಗಿಗೆ ಮರಳು ಮಾಫಿಯಾದ ನಂಟು ಬಯಲಾಗಿದೆ. ಹಾಗರಗಿಗೆ ಆಶ್ರಯ ನೀಡಿದ್ದ ಮಹಾರಾಷ್ಟದ ಸೋಲಾಪುರದ ಉದ್ಯಮಿಯೊಬ್ಬರನ್ನು ಕೂಡ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ದಿವ್ಯಾ ಹಾಗರಗಿ ಸೇರಿದಂತೆ 6 ಮಂದಿ ಆರೋಪಿಗಳಿಗೆ ಈಗಾಗಲೇ 11 ದಿನಗಳ ಸಿಐಡಿ ಕಸ್ಟಡಿ ನೀಡಲಾಗಿದೆ. ದಿವ್ಯಾ ಹಾಗರಗಿ, ಸುರೇಶ್ ಕಾಟೆಗಾಂವ್, ಅರ್ಚನಾ, ಸುನಿತಾ, ಕಾಳಿದಾಸ್, ಸದ್ದಾಂ ಹಾಗೂ ಜ್ಯೋತಿ ಪಾಟೀಲ್ ಎಂಬುವರನ್ನು 11 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ 18 ದಿನಗಳ ಕಾಲ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗೂ ಇತರರರನ್ನು ಸಿಐಡಿ ಪೊಲೀಸರು ಗುರುವಾರ ತಡರಾತ್ರಿ ಪುಣೆಯಲ್ಲಿ ಬಂಧಿಸಿ
ಕಲಬುರಗಿಗೆ ಕರೆತಂದಿದ್ದಾರೆ. ಶುಕ್ರವಾರ ವೈದ್ಯಕೀಯ ತಪಾಸಣೆ ಬಳಿಕ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದಲ್ಲಿ ದಿವ್ಯಾಳೊಂದಿಗೆ ಮರಳು ಮಾಫಿಯಾ ಡಾನ್
ಕಾಟೆಗಾಂವ್ ಅವರನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ ಹಾಗೂ ಆಕೆಯ ತಂಡಕ್ಕೆ ಆಶ್ರಯ ನೀಡಿದ್ದ ಮಹಾರಾಷ್ಟ್ರ ಸೋಲಾಪುರದ ಅಕ್ಕಲಕೋಟ ಉದ್ಯಮಿ ಸುರೇಶ ಕಾಟೆಗಾಂವ್ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಮರಳು ಮಾಫಿಯಾ ಡಾನ್ ಸುರೇಶ್ ಕಾಟೆಗಾಂವ್ ಮತ್ತು ಕಾಳಿದಾಸನನ್ನೂ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮದ ಕೇಂದ್ರಬಿಂದು ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಹಾಗೂ ಉದ್ಯಮಿ, ಮರಳು ಮಾಫಿಯಾ ಡಾನ್ ಸುರೇಶ ಕಾಟೆಗಾಂವ್ ಸುಮಾರು ದಿನಗಳಿಂದ ಪರಿಚಿತರಾಗಿದ್ದು, ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಉದ್ಯಮಿ
ಹಾಗೂ ಮರಳು ಮಾಫಿಯಾ ಡಾನ್ ಸುರೇಶ್ ಕಾಟೆಗಾಂವ್ ಮನೆಯಲ್ಲಿ ತನ್ನ ಗ್ಯಾಂಗ್ ಜತೆ ದಿವ್ಯಾ ಅಲ್ಲಿಯೇ ಆಶ್ರಯ ಪಡೆದಿದ್ದಳು ಎಂದು ತಿಳಿದು ಬಂದಿದೆ.
ತಲೆ ಮರೆಸಿಕೊಂಡಿದ್ದ ಆರೋಪಿಗಳು 18 ದಿನಗಳಿಂದ ಮೊಬೈಲ್ ಬಳಕೆ ನಿಲ್ಲಿಸಿದ್ದರು. ಎಲ್ಲರ ನಡುವೆ ಒಂದೇ ಒಂದು ಹ್ಯಾಂಡ್ ಸೆಟ್ ಬಳಕೆ ಮಾಡಿ ಹತ್ತಾರು ಸಿಮ್ ಬದಲಾವಣೆ ಮಾಡುತ್ತಿದ್ದರು. ಪದೇಪದೆ ಆಶ್ರಯ ತಾಣಗಳನ್ನು ಬದಲಾವಣೆ ಮಾಡಿ ಸಿಐಡಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು.